ಮೊಹಾಲಿ: 2008ರ ಮೊದಲ ಐಪಿಎಲ್ ಆವೃತ್ತಿಯ ವೇಳೆ ರಾಜಸ್ಥಾನ್ ರಾಯಲ್ಸ್ ಕ್ಯಾಂಪ್ ಸೇರುವ ವೇಳೆಗಾಗಲೇ ರವೀಂದ್ರ ಜಡೇಜಾ ಅಂಡರ್ 19 ವಿಶ್ವ ಚಾಂಪಿಯನ್ ಆಗಿದ್ದರು. ಆದರೆ ಶೇನ್ ವಾರ್ನ್ ಆಗಲೇ ಯುವ ಆಟಗಾರನ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ತಂಡದಲ್ಲಿ ಅವಕಾಶ ಕಲ್ಪಿಸಿದ್ದರು. ಇಂದು ಆ ನಂಬಿಕೆ ಜಡೇಜಾರಿಗೆ ಇಷ್ಟು ದೊಡ್ಡ ಯಶಸ್ಸು ಸಿಗುವಂತೆ ಮಾಡಿದೆ.
ರಾಯಲ್ಸ್ ವಾರ್ನ್ ನಾಯಕತ್ವದಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿತ್ತು. ಜಡೇಜಾ ಆಲ್ರೌಂಡರ್ ಮತ್ತು ಫಿನಿಶರ್ ಆಗಿ ಆ ತಂಡದ ಭಾಗವಾಗಿದ್ದರು. ಯುವ ಆಟಗಾರನ ಆಟಲ್ಲೆ ಫಿದಾ ಆಗಿದ್ದ ವಾರ್ನ್ ಅಂದೇ ಅವರಿದೇ ರಾಕ್ಸ್ಟಾರ್ ಎಂದು ಅಡ್ಡ ಹೆಸರನ್ನಿಟ್ಟಿದ್ದರು. ಇದನ್ನು ಸ್ವತಃ ಅವರೇ ತಮ್ಮ 'ನೋ ಸ್ಪಿನ್' ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ವಾರ್ನರ್ ಶುಕ್ರವಾರ ತಮ್ಮ 52 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದು, ಕ್ರಿಕೆಟ್ ದಂತಕತೆಯ ಸಾವಿಗೆ ಇಡೀ ಕ್ರಿಕೆಟ್ ಜಗತ್ತು ಹಾಗೂ ಅಭಿಮಾನಿ ವರ್ಗ ಕಂಬನಿ ಮಿಡಿದಿದೆ.
" ಇದೊಂದು ಅಘಾತಕಾರಿ ಸುದ್ದಿ, ನಾನು ಆ ಸುದ್ದಿ ಕೇಳಿದಾಗ ನನಗೆ ತುಂಬಾ ದುಃಖವಾಯಿತು ಮತ್ತು ನನ್ನ ಮನಸ್ಸು ಕೂಡ ಹದಗೆಟ್ಟಿತು. ಇದು ನಿಜ ಎಂದು ನಂಬುವುದಕ್ಕೆ ನನಗೆ ತುಂಬಾ ಕಷ್ಟವಾಯಿತು" ಎಂದು ವಾರ್ನ್ ಜೊತೆಗಿನ ಬಾಂಧವ್ಯದ ಬಗ್ಗೆ ಕೇಳಿದ್ದಕ್ಕೆ ಜಡೇಜಾ ಹೇಳಿದರು.
ನಾನು 2008ರಲ್ಲಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ, ಅವರು ಈ ಆಟದಲ್ಲಿ ದಂತಕತೆಯಾಗಿದ್ದರು. ಶೇನ್ ವಾರ್ನ್ ಅವರಂತಹ ಆಟಗಾರನ ಜೊತೆಗೆ ನಾನು ಆಡಲಿದ್ದೇನೆ ಎನ್ನುವುದನ್ನು ನನ್ನಿಂದಲೇ ನಂಬಲಾಗಿರಲಿಲ್ಲ. ಏಕೆಂದರೆ ನಾವು ಆಗಷ್ಟೇ ಅಂಡರ್ 19 ವಿಶ್ವಕಪ್ ಮುಗಿಸಿ ಬಂದಿದ್ದೆವು. ಆಗ ಶೇನ್ ವಾರ್ನ್ ಅಂತಹ ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ಶೇರ್ ಮಾಡಿಕೊಳ್ಳುವುದೆಂದರೆ ನಮಗೆಲ್ಲಾ ದೊಡ್ಡ ವಿಷಯ. ಆದರೂ ಆ ವಯಸ್ಸಿನಲ್ಲೇ ನನಗೆ ಅವರು ಬಹುದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದ್ದರು. ಅದು ಐಪಿಎಲ್ನಲ್ಲಿ ನನಗೆ ಸಿಕ್ಕ ನೇರ ಪ್ರವೇಶವಾಗಿತ್ತು" ಎಂದು ಜಡೇಜಾ 2ನೇ ದಿನದಾಟದ ನಂತರ ಆಸೀಸ್ ದಿಗ್ಗಜನಿಗೆ ತಮ್ಮ ಕೃತಜ್ಞತೆಯನ್ನು ಅರ್ಪಿಸಿದರು.
ಸಂತಾಪ ಸೂಚಿಸಿದ ಜಡ್ಡು
ವಾರ್ನ್ ಸಾವು ಜೀವನದಲ್ಲಿ ಯಾವಾಗ ಬೇಕಾದರೂ, ಏನು ಬೇಕಾದರೂ ಆಗಬಹುದು ಎನ್ನುವುದನ್ನು ತೋರಿಸಿದೆ. ಈ ತರಹದ ಸುದ್ದಿಯು ಇದ್ದಕ್ಕಿದ್ದಂತೆ ನಿಮ್ಮನ್ನು ಬೆಚ್ಚಿಬೀಳಿಸುತ್ತವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲು ಬಯಸುತ್ತೇನೆ ಎಂದು ಜಡೇಜಾ ಹೇಳಿದ್ದಾರೆ.
ಇದನ್ನೂ ಓದಿ:ಜಡೇಜಾ ಶತಕ: ನಿಮ್ಮನ್ನು ಗುರುತಿಸಿದ ವಾರ್ನ್ಗೆ ದೊಡ್ಡ ಗೌರವ ನೀಡಿದ್ದೀರಾ ಎಂದ ಅಭಿಮಾನಿಗಳು