ನವದೆಹಲಿ: ಇತ್ತೀಚಿಗಷ್ಟೇ ನಿಧನರಾದ ಆಸ್ಟ್ರೇಲಿಯಾದ ಸ್ಪಿನ್ನರ್ ಶೇನ್ ವಾರ್ನ್ ತಮ್ಮ ವೃತ್ತಿ ಜೀವನದ ಸಂದರ್ಭದಲ್ಲಿ ಕೆಲವು ತಂತ್ರದ ಎಸೆತಗಳನ್ನು ಪ್ರಯೋಗಿಸುತ್ತಿದ್ದರು ಮತ್ತು ಆ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಆದರೆ ಲೆಜೆಂಡರಿ ಸ್ಪಿನ್ನರ್ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಭಾರತದಲ್ಲಿ ಅವರ ಪ್ರದರ್ಶನ ತೀರ ಸಾಮಾನ್ಯವಾಗಿತ್ತು ಎಂದು ಬ್ಯಾಟಿಂಗ್ ಐಕಾನ್ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
1992ರಲ್ಲಿ ಪದಾರ್ಪಣೆ ಮಾಡಿದ ವಾರ್ನ್, ಆಸ್ಟ್ರೇಲಿಯಾ ಪರ 145 ಟೆಸ್ಟ್ ಪಂದ್ಯಗಳಿಂದ 708 ವಿಕೆಟ್ ಮತ್ತು 194 ಏಕದಿನ ಪಂದ್ಯಗಳಿಂದ 293 ವಿಕೆಟ್ ಪಡೆದಿದ್ದರು. ವಾರ್ನ್ ಅವರು ನೀವು ಕಂಡ ಶ್ರೇಷ್ಠ ಸ್ಪಿನ್ನರ್ ಎನ್ನಬಹುದೇ ಎಂದು ಕೇಳಿದ್ದಕ್ಕೆ, ಭಾರತ ತಂಡದ ಮಾಜಿ ನಾಯಕ ಗವಾಸ್ಕರ್, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ಭಾರತೀಯ ಸ್ಪಿನ್ನರ್ಗಳು ವಾರ್ನ್ಗಿಂತ ಸಾಕಷ್ಟು ಉತ್ತಮರು ಎಂದಿದ್ದಾರೆ.
ಇದನ್ನೂ ಓದಿ: ಗಾಯದಿಂದ ಚೇತರಿಸಿಕೊಂಡ ಅಕ್ಷರ್, ಒಂದೂ ಪಂದ್ಯವಾಡದೆ ಹೊರಬಿದ್ದ ಕುಲ್ದೀಪ್
ಅವರು ಶ್ರೇಷ್ಠರಲ್ಲ ಎಂದು ನಾನು ಹೇಳುವುದಿಲ್ಲ, ಆದರೆ ನನ್ನ ಪ್ರಕಾರ ಭಾರತೀಯ ಸ್ಪಿನ್ನರ್ಗಳು ಮತ್ತು ಮುತ್ತಯ್ಯ ಮುರಳೀಧರನ್ ಅವರು ಖಂಡಿತವಾಗಿ ಶೇನ್ ವಾರ್ನ್ ಅವರಿಗಿಂದ ಉತ್ತಮ ಸ್ಪಿನ್ನರ್ಗಳಾಗಿದ್ದಾರೆ. ಏಕೆಂದರೆ, ಭಾರತದ ವಿರುದ್ಧ ಶೇನ್ ವಾರ್ನ್ ಅವರ ದಾಖಲೆಗಳನ್ನು ನೋಡಿ. ಅದು ತುಂಬಾ ಸಾಮಾನ್ಯವಾಗಿದೆ. ಅವರು ಭಾರತದಲ್ಲಿ ಒಮ್ಮೆ ಮಾತ್ರ 5 ವಿಕೆಟ್ ಪಡೆದಿದ್ದಾರೆ. ಅದು ಜಹೀರ್ ಖಾನ್ ಹುಚ್ಚುಚ್ಚಾಗಿ ಬ್ಯಾಟ್ ಬೀಸಲು ಹೋಗಿ ವಾರ್ನ್ಗೆ 5 ವಿಕೆಟ್ ಸಿಗಲು ಕಾರಣರಾಗಿದ್ದರು ಎಂದು ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಸಿಡಿಸಿದ ಮೊದಲ ಬ್ಯಾಟರ್ ಹೇಳಿದ್ದಾರೆ.
ಶೇನ್ ವಾರ್ನ್ ಸ್ಪಿನ್ ಬೌಲಿಂಗ್ಗೆ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲ ಭಾರತದ ಆಟಗಾರರ ವಿರುದ್ಧ ಹೆಚ್ಚು ಯಶಸ್ಸು ಸಾಧಿಸಿಲ್ಲ. ಹಾಗಾಗಿ ಅವರನ್ನು ಅತ್ಯುತ್ತಮ ಸ್ಪಿನ್ನರ್ ಎಂದು ನಾನು ಆಲೋಚಿಸುವುದಿಲ್ಲ. ಶ್ರೀಲಂಕಾದ ಮುತ್ತಯ್ಯ ಮುರಳೀದರನ್ ಭಾರತದ ವಿರುದ್ಧ ಅತ್ಯುತ್ತಮ ಯಶಸ್ಸು ಸಾಧಿಸಿದ್ದಾರೆ. ಹಾಗಾಗಿ ವಾರ್ನ್ಗಿಂತಲೂ ಅವರಿಗೆ ಹೆಚ್ಚಿನ ಶ್ರೇಯಾಂಕ ನೀಡುತ್ತೇನೆ ಎಂದು ಗವಾಸ್ಕರ್ ಹೇಳಿದ್ದಾರೆ.
ಮ್ಯಾಜಿಕ್ ಎಸೆತಗಳ ಕಲೆ ಬಗ್ಗೆ ಗವಾಸ್ಕರ್ ಮೆಚ್ಚುಗೆ: ರಿಸ್ಟ್ ಸ್ಪಿನ್ನರ್ಗಳು ಕರಗತ ಮಾಡಿಕೊಳ್ಳುವುದಕ್ಕೆ ಕಷ್ಟಕರವಾದ ಕೌಶಲ್ಯಗಳನ್ನು ಚೆನ್ನಾಗಿ ರೂಢಿಸಿಕೊಂಡಿದ್ದರು. ಟೆಸ್ಟ್ ಕ್ರಿಕೆಟ್ನಲ್ಲಿ 700 ಕ್ಕೂ ಹೆಚ್ಚು ವಿಕೆಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ನೂರಕ್ಕೂ ಹೆಚ್ಚು ವಿಕೆಟ್ ಪಡೆದಿರುವುದು ಅವರು ಎಷ್ಟು ಒಳ್ಳೆಯ ಬೌಲರ್ ಎನ್ನುವುದನ್ನು ಸೂಚಿಸುತ್ತದೆ. ಬೆರಳಿನಿಂದ ಸ್ಪಿನ್ ಮಾಡುವುದು ತುಂಬಾ ಸುಲಭವಾದದ್ದು, ನೀವು ಯಾವ ರೀತಿ ಬೌಲಿಂಗ್ ಮಾಡುಬೇಕು ಎಂದು ಬಯಸುತ್ತೀರೋ ,ಅದರಲ್ಲಿ ಸಾಕಷ್ಟು ನಿಯಂತ್ರಣ ಸಾಧಿಸಬಹದು. ಆದರೆ ಲೆಗ್ ಸ್ಪಿನ್ ಮತ್ತು ರಿಸ್ಟ್ ಸ್ಪಿನ್ ಮಾಡುವುದು ತುಂಬಾ ಕಷ್ಟ. ಆದರೆ ವಾರ್ನ್ ಅವರು ಬೌಲಿಂಗ್ ಒಂದು ರೀತಿ ಮ್ಯಾಜಿಕ್ನಂತಿತ್ತು. ಅವರು ತಾವೂ ಅಂದುಕೊಂಡಂತೆ ಬೌಲಿಂಗ್ ಮಾಡಲು ಸಫಲರಾಗಿದ್ದರಿಂದಲೇ ಇಂದು ಪ್ರಪಂಚದಾದ್ಯಂತ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಶೇನ್ ವಾರ್ನ್ಗೆ ಅಂತಿಮ ಗೌರವ