ಕೊಲಂಬೊ: ಜುಲೈ 18ರಿಂದ ಭಾರತ ತಂಡ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಆಡಲಿದೆ. ಈಗಾಗಲೆ ದ್ವೀಪ ರಾಷ್ಟ್ರ ವಿರುದ್ಧದ ಸರಣಿಗೆ 6 ಹೊಸ ಆಟಗಾರರ ಸಹಿತ 20 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಶಿಖರ್ ಧವನ್, ಭುವನೇಶ್ವರ್ ಸೇರಿದಂತೆ ಕೆಲವು ಹಿರಿಯ ಆಟಗಾರರಿದ್ದಾರೆ.
ಐಪಿಎಲ್ನಲ್ಲಿ ತಮ್ಮ ಪ್ರದರ್ಶನದ ಮೂಲಕ ಎಲ್ಲರ ಮನಗೆದ್ದಿರುವ ಕರ್ನಾಟಕದ ದೇವದತ್ ಪಡಿಕ್ಕಲ್, ರಾಜಸ್ಥಾನದ ಚೇತನ್ ಸಕಾರಿಯಾ, ದೆಹಲಿಯ ನಿತೀಶ್ ರಾಣಾ ಸೇರಿದಂತೆ ಕೆಲವು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ಕಾಯುತ್ತಿದ್ದಾರೆ. ಪೃಥ್ವಿ ಶಾ ತಂಡಕ್ಕೆ ಭಾರತ ತಂಡಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಗಿರುವ ವಿವಿಎಸ್ ಲಕ್ಷ್ಮಣ್ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದ ವೇಳೆ ಈ ಸರಣಿಗೆ ತಮ್ಮ ನೆಚ್ಚಿನ 11ರ ಬಳಗವನ್ನು ಪ್ರಕಟಿಸಿದ್ದಾರೆ.
ಲಕ್ಷ್ಮಣ್ ಆರಂಭಿಕರಾಗಿ ಶಿಖರ್ ಧವನ್ ಮತ್ತು ಪೃಥ್ವಿ ಶಾರನ್ನು ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕಕ್ಕೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಸೂರ್ಯಕುಮಾರ್ ಯಾದವ್, 4ರಲ್ಲಿ ಸಂಜು ಸಾಮ್ಸನ್, 5ನೇ ಕ್ರಮಾಂಕಕ್ಕೆ ಕನ್ನಡಿಗ ಮನೀಶ್ ಪಾಂಡೆಗೆ ಅವಕಾಶ ನೀಡಿದ್ದಾರೆ.
6 ಮತ್ತು 7ನೇ ಕ್ರಮಾಂಕದಲ್ಲಿ ಆಲ್ರೌಂಡರ್ಗಳಾದ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ಸಹೋದರರಿದ್ದಾರೆ. ಇವರಿಬ್ಬರ ಜೊತೆಗೆ ತಲಾ ಇಬ್ಬರು ವೇಗಿ ಮತ್ತು ಸ್ಪಿನ್ನರ್ಗಳನ್ನು ಆಯ್ಕೆ ಮಾಡಿದ್ದಾರೆ. ಭುವನೇಶ್ವರ್ ಕುಮಾರ್, ದೀಪಕ್ ಚಹರ್ ಮತ್ತು ಕುಲ್ದೀಪ್- ಚಹಾಲ್ಗೆ ಲಕ್ಷ್ಮಣ್ ಮಣೆಯಾಕಿದ್ದಾರೆ.
ಲಕ್ಷ್ಮಣ್ ಘೋಷಿಸಿದ ತಂಡದಲ್ಲಿ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಒಂದು ಬದಲಾವಣೆ ಬಯಸುವುದಾಗಿ ತಿಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಸಮರ್ಥರಾಗಿದ್ದರೆ ಕೃನಾಲ್ ಪಾಂಡ್ಯ ಬದಲಿಗೆ ನಿತೀಶ್ ರಾಣಾರನ್ನು ಹೆಚ್ಚುವರಿ ಬ್ಯಾಟ್ಸ್ಮನ್ ಆಗಿ ತಂಡಕ್ಕೆ ಆಯ್ಕೆ ಮಾಡಲು ಬಯಸುತ್ತೇನೆ ಎಂದು ಪಠಾಣ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತ vs ಶ್ರೀಲಂಕಾ: ಟಿ20, ಏಕದಿನ ಪಂದ್ಯಗಳ ಸಮಯ ಬದಲಾವಣೆ