ನವದೆಹಲಿ: ಆಸ್ಟ್ರೇಲಿಯಾದ ಹಿಟ್ಟರ್ ಆ್ಯರೋನ್ ಫಿಂಚ್ ಏಕದಿನ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದು, ಭಾರತದ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅವರೊಂದಿಗಿನ ಒಡನಾಟ, ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವಾಗಿನ ಕ್ಷಣಗಳನ್ನು ನೆನೆದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ನಾಳೆ(ಭಾನುವಾರ) ನಡೆಯುವ ಏಕದಿನ ಪಂದ್ಯವು ಆ್ಯರೋನ್ ಫಿಂಚ್ರ ಕೊನೆಯ ಏಕದಿನವಾಗಿದೆ. ನಿನ್ನೆಯಷ್ಟೇ ಫಿಂಚ್ ದಿಢೀರ್ ಆಗಿ ಸೀಮಿತ ಓವರ್ಗಳ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು.
"ಇಷ್ಟು ವರ್ಷಗಳ ಕಾಲ ನಿಮ್ಮ ವಿರುದ್ಧ ಮತ್ತು ಆರ್‌ಸಿಬಿಯಲ್ಲಿ ನಿಮ್ಮೊಂದಿಗೆ ಆಡಿದ್ದು ಅದ್ಭುತ ಕ್ಷಣಗಳಾಗಿವೆ. ನಿಮ್ಮ ಮುಂದಿನ ಜೀವನವು ಆನಂದದಿಂದ ತುಂಬಿರಲಿ. ಒಳ್ಳೆಯದಾಗಲಿ" ಎಂದು ವಿರಾಟ್ ಹಾರೈಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ ಮತ್ತು ಆ್ಯರೋನ್ ಫಿಂಚ್ 2020 ಋತುವಿನಲ್ಲಿ ಒಟ್ಟಿಗೆ ಆಡಿದ್ದರು. ಆ ಚರಣದಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ತೋರದ ಫಿಂಚ್ ಕೇವಲ 268 ರನ್ ಬಾರಿಸಿದ್ದರು. ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಪುರುಷರ ಟಿ20 ವಿಶ್ವಕಪ್ ವೇಳೆ ಫಿಂಚ್ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ.
2013 ರಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ ಫಿಂಚ್ 145 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 39.13 ರ ಸರಾಸರಿಯಲ್ಲಿ 5,401 ರನ್ ಗಳಿಸಿದ್ದಾರೆ. 17 ಶತಕಗಳು ಮತ್ತು 30 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ವರ್ಷದ ಆರಂಭದಿಂದ ಅವರು ಲಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಓದಿ: ಅಂತಾರಾಷ್ಟ್ರೀಯ ODI ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ ಆ್ಯರೋನ್ ಫಿಂಚ್