ಹೈದರಾಬಾದ್: ಟೀಂ ಇಂಡಿಯಾ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ತೆಗೆದುಕೊಂಡಿರುವ ದಿಢೀರ್ ನಿರ್ಧಾರ ಎಲ್ಲರಲ್ಲೂ ಆಘಾತ ಮೂಡಿಸಿದ್ದು, ಇದರಿಂದ ಇಡೀ ಕ್ರಿಕೆಟ್ ಜಗತ್ತು ಅಚ್ಚರಿಗೊಂಡಿದೆ. ಟಿ-20, ಏಕದಿನ ನಂತರ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದಲೂ ಕೆಳಗಿಳಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋತ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಭಾರತೀಯ ಟೆಸ್ಟ್ ನಾಯಕತ್ವದಿಂದ ದಿಢೀರ್ ಆಗಿ ವಿರಾಟ್ ಕೊಹ್ಲಿ ಕೆಳಗಿಳಿದಿದ್ದು, ಇದೀಗ ನೂತನ ಕ್ಯಾಪ್ಟನ್ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಈ ಸ್ಥಾನ ನಿಭಾಯಿಸಲು ಟೀಂ ಇಂಡಿಯಾದಲ್ಲಿ ಅನೇಕ ಅನುಭವಿ ನಾಯಕರಿದ್ದಾರೆ.
ಮೂವರು ಪ್ಲೇಯರ್ಸ್ ಹೆಸರು ಮುಂಚೂಣಿಯಲ್ಲಿ..
ಕನ್ನಡಿಗ ಕೆ ಎಲ್ ರಾಹುಲ್
ಬಿಸಿಸಿಐ ಬಳಿ ಇರುವ ಎರಡನೇ ಆಯ್ಕೆ ಕೆಎಲ್ ರಾಹುಲ್. ವಿರಾಟ್, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿರುವ ಅನುಭವ ಹೊಂದಿರುವ ರಾಹುಲ್ಗೂ ಬಿಸಿಸಿಐ ಮಣೆ ಹಾಕಬಹುದು. 29 ವರ್ಷದ ರಾಹುಲ್, ಟೆಸ್ಟ್ ತಂಡಕ್ಕೆ ಮಾತ್ರ ನಾಯಕನಾಗಿ ನೇಮಕ ಮಾಡಿ, ಅವರಿಗೆ ಜವಾಬ್ದಾರಿ ನೀಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ರೋಹಿತ್ ಶರ್ಮಾ ನಿಗದಿತ ಓವರ್ಗೆ ನಾಯಕನಾಗಿ ಮಾತ್ರ ಮುಂದುವರೆದರೆ, ಟೆಸ್ಟ್ ನಾಯಕತ್ವ ರಾಹುಲ್ ಹೆಗಲಿಗೆ ಏರಲಿದೆ.
ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ರೋಹಿತ್ ಶರ್ಮಾ ದೊಡ್ಡ ಸ್ಪರ್ಧಿಯಾಗಿದ್ದಾರೆ. ಈಗಾಗಲೇ ಏಕದಿನ ಮತ್ತು ಟಿ20 ನಾಯಕನಾಗಿ ನೇಮಕಗೊಂಡಿರುವ ಇವರಿಗೆ ಟೆಸ್ಟ್ ನಾಯಕತ್ವ ಜವಾಬ್ದಾರಿ ನೀಡಿದ್ರೂ ಅಚ್ಚರಿ ಪಡಬೇಕಿಲ್ಲ. ವಿರಾಟ್ ಕೊಹ್ಲಿ ರೀತಿ ವಿಶ್ವ ಕ್ರಿಕೆಟ್ ಕಂಡಿರುವ ಶ್ರೇಷ್ಠ ಬ್ಯಾಟರ್ ಆಗಿರುವ ಮುಂಬೈಕರ್ ಬಿಸಿಸಿಐನ ಮೊದಲ ಆಯ್ಕೆಯಾಗಿದ್ದಾರೆ. ಈ ಹಿಂದೆ ಮೂರು ಮಾದರಿ ಕ್ರಿಕೆಟ್ಗೆ ಒಬ್ಬ ಮಾತ್ರ ನಾಯಕ ಇರುವಂತೆ ರೋಹಿತ್ಗೆ ಈ ಅವಕಾಶ ನೀಡಬಹುದು.
ವೇಗಿ ಜಸ್ಪ್ರೀತ್ ಬುಮ್ರಾ
ಟೀಂ ಇಂಡಿಯಾ ಟೆಸ್ಟ್ನ ನಾಯಕನಾಗುವ ಸಾಲಿನಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಇದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ವೇಳೆ ತಂಡದ ಉಪನಾಯಕನಾಗಿದ್ದ ಇವರಿಗೆ ಬಿಸಿಸಿಐ ಮಣೆ ಹಾಕಬಹುದು. ಆಸ್ಟ್ರೇಲಿಯಾ ಈಗಾಗಲೇ ಬೌಲರ್ ಪ್ಯಾಟ್ ಕಮಿನ್ಸ್ ಅವರನ್ನ ಟೆಸ್ಟ್ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದ್ದು, ಅದೇ ರೀತಿ ಬಿಸಿಸಿಐ ಬುಮ್ರಾಗೆ ಅವಕಾಶ ನೀಡಬಹುದು. ಮೂರು ಮಾದರಿ ಕ್ರಿಕೆಟ್ನಲ್ಲಿ ತಂಡದ ಖಾಯಂ ಆಟಗಾರನಾಗಿರುವ ಯಾರ್ಕರ್ ಕಿಂಗ್, ಬಿಸಿಸಿಐ ಬಳಿ ಇರುವ ಮೂರನೇ ಆಯ್ಕೆಯಾಗಿದ್ದಾರೆ.
ಈ ಹಿಂದೆ ಟೆಸ್ಟ್ ಕ್ರಿಕೆಟ್ನಲ್ಲಿ ಉಪನಾಯಕನಾಗಿದ್ದ ರಹಾನೆ ಸ್ಥಾನವನ್ನ ರಾಹುಲ್ಗೆ ನೀಡಿದ್ದು, ಬಿಸಿಸಿಸಿ ಮತ್ತೊಮ್ಮೆ ಅವರಿಗೆ ನಾಯಕತ್ವ ನೀಡುವ ಸಾಧ್ಯತೆ ಕಡಿಮೆ ಇದೆ. ಇನ್ನು ತಂಡದ ಅನುಭವಿ ಆಟಗಾರ ಪೂಜಾರಾಗೂ ಮಣೆ ಹಾಕುವ ಅವಕಾಶ ಕಡಿಮೆ ಇದೆ.