ರಾಜ್ಕೋಟ್: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗಾಗಲೇ ಮಿಂಚು ಹರಿಸಿರುವ ಮಹಾರಾಷ್ಟ್ರದ ಉದಯೋನ್ಮುಖ ಬ್ಯಾಟರ್ ಋತುರಾಜ್ ಗಾಯಕ್ವಾಡ್ ದೇಶಿಯ ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.
ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿರುವ ಈ ಪ್ಲೇಯರ್ ಇಂದಿನ ಕೇರಳ ವಿರುದ್ಧದ ಪಂದ್ಯದಲ್ಲೂ ಶತಕ ಸಾಧನೆ ಮಾಡಿದ್ದಾರೆ.
2021-22ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ವಿರುದ್ಧ ಮಾಧವ್ ರಾವ್ ಸಿಂಧಿಯಾ ಸ್ಟೇಡಿಯಂ ನಡೆದ ಇಂದಿನ ಪಂದ್ಯದಲ್ಲಿ ಮಿಂಚು ಹರಿಸಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಗಾಯಕ್ವಾಡ್, ತಾವು ಎದುರಿಸಿದ 129 ಎಸೆತಗಳಲ್ಲಿ 3 ಸಿಕ್ಸರ್, 9 ಬೌಂಡರಿ ಸೇರಿದಂತೆ 124ರನ್ಗಳಿಕೆ ಮಾಡಿದ್ದಾರೆ.
ಈ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಹೊರಹಾಕಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿ ಟೀಂ ಇಂಡಿಯಾ ಕದ ತಟ್ಟುವ ಸಾಧ್ಯತೆ ದಟ್ಟವಾಗಿದೆ.
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿರುವ ಮಹಾರಾಷ್ಟ್ರ ಋತುರಾಜ್ ಗಾಯಕ್ವಾಡ್ ಇದೀಗ ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ಮುಂದುವರೆಸಿರುವ ಕಾರಣ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.
ಗಾಯಕ್ವಾಡ್ ಇದೀಗ ತಾವು ಆಡಿರುವ ಮೂರು ಪಂದ್ಯಗಳಿಂದ 414ರನ್ಗಳಿಕೆ ಮಾಡುವ ಮೂಲಕ ವಿಜಯ್ ಹಜಾರೆ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿರಿ: ವಿಜಯ ಹಜಾರೆ ಟ್ರೋಫಿಯಲ್ಲಿ ಋತುರಾಜ್ ಆರ್ಭಟ: ಸತತ 2 ಶತಕ ಸಿಡಿಸಿದ ಗಾಯಕ್ವಾಡ್
ಈಗಾಗಲೇ ಮಧ್ಯ ಪ್ರದೇಶದ ವಿರುದ್ಧ 112 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ 136 ರನ್ ಸಿಡಿಸಿ 329 ರನ್ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಲು ನೆರವಾಗಿದ್ದರು.
ಇದಾದ ಬಳಿಕ ಗುರುವಾರ ನಡೆದ ಛತ್ತೀಸ್ಗಢ ವಿರುದ್ಧದ ಪಂದ್ಯದಲ್ಲಿ ಗಾಯಕ್ವಾಡ್ ಅಜೇಯ ಶತಕ ಸಿಡಿಸಿ ಮಹಾರಾಷ್ಟ್ರಕ್ಕೆ 8 ವಿಕೆಟ್ಗಳ ಜಯ ತಂದು ಕೊಟ್ಟಿದ್ದರು. ಈ ಪಂದ್ಯದಲ್ಲಿ ಗಾಯಕ್ವಾಡ್ 143 ಎಸೆತಗಳಲ್ಲಿ 14 ಬೌಂಡರಿ ಮತ್ತು 5 ಸಿಕ್ಸರ್ಗಳ ಸಹಿತ 154 ರನ್ಗಳಿಸಿದರು.
6 ಕೋಟಿ ರೂ.ಗೆ ರಿಟೈನ್ ಆದ ಮಹಾರಾಷ್ಟ್ರ ನಾಯಕ
ಮಹಾರಾಷ್ಟ್ರ ತಂಡದ ನಾಯಕನಾಗಿ ಮಿಂಚು ಹರಿಸುತ್ತಿರುವ ಋತುರಾಜ್ ಗಾಯಕ್ವಾಡ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 6 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿದೆ. 2020ರಲ್ಲಿ ಇವರನ್ನು ಫ್ರಾಂಚೈಸಿ ಕೇವಲ 20 ಲಕ್ಷಕ್ಕೆ ಖರೀದಿಸಿತ್ತು.
2021ರ ಆವೃತ್ತಿಯಲ್ಲಿ 16 ಪಂದ್ಯಗಳಿಂದ 4 ಅರ್ಧಶತಕ ಮತ್ತು 1 ಶತಕದ ನೆರವಿನಿಂದ 635 ರನ್ ಸಿಡಿಸಿ ಆರೆಂಜ್ ಕ್ಯಾಪ್ ಪಡೆದಿದ್ದಲ್ಲದೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಪ್ರಮುಖ ಪಾತ್ರವಹಿಸಿದ್ದರು.
ಪ್ರಮುಖರ ಸಾಲಿಗೆ ಸೇರುತ್ತಾರಾ ಗಾಯಕ್ವಾಡ್?
ದೇಶೀಯ ಕ್ರಿಕೆಟ್ನಲ್ಲಿ ಈಗಾಗಲೇ ಟೀಂ ಇಂಡಿಯಾದ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಹಾಗೂ ಪೃಥ್ವಿ ಶಾ ಸತತ 4 ಸೆಂಚುರಿ ಬಾರಿಸಿ ರೆಕಾರ್ಡ್ ಬರೆದಿದ್ದು, ಇದೀಗ ಗಾಯಕ್ವಾಡ್ ಮತ್ತೊಂದು ಶತಕ ಸಾಧನೆ ಮಾಡಿದ್ರೆ, ಪ್ರಮುಖರ ಸಾಲಿಗೆ ಸೇರಿಕೊಳ್ಳಲಿದ್ದಾರೆ. ಮಹಾರಾಷ್ಟ್ರ ತನ್ನ ಮುಂದಿನ ಪಂದ್ಯವನ್ನ ಉತ್ತರಾಖಂಡ ವಿರುದ್ಧ ಆಡಲಿದೆ.