ಮುಂಬೈ (ಮಹಾರಾಷ್ಟ್ರ): ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತವಾಗಿ ನಾಲ್ಕನೇ ಸೋಲು ಅನುಭವಿಸಿದೆ. ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ ಪಡೆ ವಿರುದ್ಧ ಯುಪಿ ವಾರಿಯರ್ಸ್ 10 ವಿಕೆಟ್ಗಳ ಜಯ ದಾಖಲಿಸಿದೆ.
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆರ್ಸಿಬಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ, ಆರಂಭದಲ್ಲೇ ನಾಯಕಿ ಸ್ಮೃತಿ ಮಂಧಾನ (4) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಂತರದಲ್ಲಿ ಸೋಫಿಯಾ ಡಿವೈನ್ ಮತ್ತು ಎಲ್ಲಿಸ್ ಪೆರಿ ದಿಟ್ಟ ಜೊತೆಯಾಟ ನೀಡಿದರು. ಇದರಿಂದ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸುತ್ತಿದ್ದ ಆರ್ಸಿಬಿ ತಂಡ ಬೃಹತ್ ರನ್ಗಳ ಕಲೆ ಹಾಕುವ ಮುನ್ಸೂಚನೆ ನೀಡಿತು.
ಇದನ್ನೂ ಓದಿ: ಐಪಿಎಲ್ನಲ್ಲಿ ಧೋನಿ ಪರಂಪರೆ ಅಂತ್ಯ: ಮ್ಯಾಥ್ಯೂ ಹೇಡನ್
ಇದರ ನಡುವೆ 24 ಎಸತೆಗಳಲ್ಲಿ ಒಂದು ಸಿಕ್ಸರ್ ಮತ್ತು ಐದು ಬೌಂಡರಿಗಳ ಸಮೇತ 36 ರನ್ ಗಳಿಸಿದ್ದ ಡಿವೈನ್ ವಿಕೆಟ್ ಒಪ್ಪಿಸಿದರು. ನಂತರ ಬಂದ ಕಾನಿಕಾ ಅಹುಜಾ (8), ಹೀಥರ್ ನೈಟ್ (2) ಬೇಗನೇ ಪೆವಿಲಿಯನ್ ಸೇರಿಕೊಂಡರು. ಮತ್ತೊಂದೆಡೆ, ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಎಲ್ಲಿಸ್ ಪೆರಿ ಅರ್ಧಶತಕ ಬಾರಿಸಿದರು. ಆದರೂ, ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. 39 ಬಾಲ್ಗಳಲ್ಲಿ ಒಂದು ಸಿಕ್ಸರ್ ಹಾಗೂ ಆರು ಬೌಂಡರಿಗಳ ಸಮೇತ 52 ರನ್ ಕಲೆ ಹಾಕಿ ಪೆರಿ ಔಟಾದರು.
ಇದಾದ ಬಳಿಕ ಯಾವುದೇ ಬ್ಯಾಟರ್ಗಳಿಂದ ನಿರೀಕ್ಷಿತ ಆಟ ಮೂಡಿ ಬರಲಿಲ್ಲ. ಶ್ರೇಯಾಂಕಾ ಪಾಟೀಲ್ (15), ಎರಿನ್ ಬರ್ನ್ (12) ಅವರಿಂದ ಅಲ್ಪ ಮೊತ್ತದ ಕಾಣಿಕೆ ಮಾತ್ರ ನೀಡಲು ಮಾತ್ರ ಸಾಧ್ಯವಾಯಿತು. ರಿಚಾ ಘೋಷ್ (1), ಕೋಮಲ್ ಜಂಜಾದ್ (5 ಅಜೇಯ), ರೇಣುಕಾ ಠಾಕೂರ್ ಸಿಂಗ್ (3), ಸಹನಾ ಪವಾರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 19.3 ಓವರ್ಗಳಿಗೆ 138 ರನ್ಗಳಿಗೆ ಆರ್ಸಿಬಿ ಸರ್ವಪತನ ಕಂಡಿತು.
139 ರನ್ಗಳ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ಬ್ಯಾಟರ್ಗಳು ಅದ್ಭುತ ಆಟ ಪ್ರದರ್ಶಿಸಿದರು. ಆರಂಭಿಕರಾಗಿ ಕಣಕ್ಕೆ ಬಂದ ನಾಯಕಿ ಅಲಿಸ್ಸಾ ಹೀಲಿ ಅಮೋಘ ಆಟವಾಡಿದರು. ಕೇವಲ 47 ಎಸೆತಗಳಲ್ಲಿ 18 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದ ಅಲಿಸ್ಸಾ ಹೀಲಿ ಅಜೇಯ 96 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು. ತಮ್ಮ ನಾಯಕಿಗೆ ಭರ್ಜರಿ ಸಾಥ್ ನೀಡಿದ ದೇವಿಕಾ ವೈದ್ಯ 31 ಎಸೆತಗಳಲ್ಲಿ ಐದು ಬೌಂಡರಿಗಳ ಸಮೇತ 36 ರನ್ಗಳನ್ನು ಸಿಡಿಸಿ ಅಜೇಯರಾಗಿಯೇ ಉಳಿದರು. ಅಲಿಸ್ಸಾ ಹೀಲಿ ಮತ್ತು ದೇವಿಕಾ ವೈದ್ಯ ಅವರ ಅಮೋಘ ಜೊತೆಯಾಟದಿಂದ 13 ಓವರ್ಗಳಲ್ಲೇ 139 ರನ್ ಕಲೆ ಹಾಕಿದ ಯುಪಿ ವಾರಿಯರ್ಸ್ ಜಯಭೇರಿ ಬಾರಿಸಿತು.
ಇದನ್ನೂ ಓದಿ: ಬಾರ್ಡರ್ ಗವಾಸ್ಕರ್ ಟ್ರೋಫಿ: ಅತಿ ಹೆಚ್ಚು ವಿಕೆಟ್ ಪಡೆದ ಅಶ್ವಿನ್, ಪಂಚ ವಿಕೆಟ್ ದಾಖಲೆ