ದುಬೈ : ವಿಶ್ವದಲ್ಲೇ ಮಿಲಿಯನ್ ಡಾಲರ್ ಟೂರ್ನಿಯಂದೇ ಹೆಸರಾಗಿರುವ ಐಪಿಎಲ್ ಆಯೋಜನೆಗಾಗಿ ಬಿಸಿಸಿಐ ತಲೆಕೆಡಿಸಿಕೊಂಡಷ್ಟು ದೇಶಿ ಕ್ರಿಕೆಟ್ಗೆ ಗಮನ ನೀಡುತ್ತಿಲ್ಲ ಎಂಬ ಟೀಕೆ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಆದರೆ, 60 ಪಂದ್ಯಗಳ ಐಪಿಎಲ್ ಜೊತೆ 2000 ಪಂದ್ಯಗಳ ಡೊಮೆಸ್ಟಿಕ್ ಕ್ರಿಕೆಟ್ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಕಳೆದ ಆವೃತ್ತಿಯ ಐಪಿಎಲ್ ಅನ್ನು ಯುಎಇಯಲ್ಲಿ ಆಯೋಜನೆ ಮಾಡಿದ್ದ ಬಿಸಿಸಿಐ ರದ್ದಾಗಿರುವ 14ನೇ ಆವೃತ್ತಿಯನ್ನು ಪೂರ್ಣಗೊಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ, ಕೋವಿಡ್-19 ಬಿಕ್ಕಟ್ಟಿನ ನೆಪವೊಡ್ಡಿ ರಣಜಿ ಟ್ರೋಫಿ ಮತ್ತು ಜೂನಿಯರ್ ಕ್ರಿಕೆಟ್ ಪಂದ್ಯಗಳನ್ನು ಆಯೋಜನೆ ಮಾಡಿಲ್ಲ. ಸಾವಿರಾರು ಕ್ರಿಕೆಟಿಗರು, ಪಂದ್ಯದ ಅಧಿಕಾರಿಗಳಿಗೆ ಬಯೋ ಸೆಕ್ಯೂರ್ ವಾತಾವರಣ ಕಲ್ಪಿಸಿಕೊಡುವುದು ಅಸಾಧ್ಯ ಎಂದು ಬಿಸಿಸಿಐ ಕಾರಣ ಹೇಳುತ್ತಿದೆ.
ದೇಶಿ ಕ್ರಿಕೆಟ್ ಕಡೆಗಣಿಸಿ ಬಿಸಿಸಿಐ ತನ್ನ ಗಮನವನ್ನು ಐಪಿಎಲ್ ಕಡೆಗೆ ಹೆಚ್ಚು ನೀಡುತ್ತಿರುವುದರಿಂದ ದೇಶಿ ಕ್ರಿಕೆಟ್ ನಂಬಿಕೊಂಡಿರುವ ಸಾವಿರಾರು ಕ್ರಿಕೆಟಿಗರು ಸಮಸ್ಯೆಗೀಡಾಗಿದ್ದಾರೆ ಎಂದು ಕೆಲವು ಕ್ರಿಕೆಟ್ ತಜ್ಞರು ಟೀಕಿಸಿದ್ದಾರೆ. ಆದರೆ, ಜಯ್ ಶಾ ಈ ಟೀಕೆಯನ್ನು ಅಲ್ಲೆಗೆಳೆದಿದ್ದಾರೆ.
"ಈ ಕುರಿತು ಟೀಕೆ ಅನಗತ್ಯ ಮತ್ತು ಅನ್ಯಾಯವಾಗಿದೆ ಎಂದು ನಾನು ಭಾವಿಸುತ್ತೇನೆ. 2020ರಲ್ಲಿ ಸಾಂಕ್ರಾಮಿಕದ ಮಧ್ಯದಲ್ಲೂ ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾ ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಪಂದ್ಯಾವಳಿ ಹಾಗೂ ಹಿರಿಯ ಮಹಿಳಾ ಏಕದಿನ ಪಂದ್ಯಾವಳಿಯನ್ನು ನಡೆಸಿದ್ದೇವೆ" ಎಂದು ವಿಶ್ವಕಪ್ ಮತ್ತು ಐಪಿಎಲ್ ಸಿದ್ಧತೆಗಳ ಮೇಲ್ವಿಚಾರಣೆಗಾಗಿ ದುಬೈನಲ್ಲಿರುವ ಶಾ ಗಲ್ಫ್ ನ್ಯೂಸ್ಗೆ ತಿಳಿಸಿದ್ದಾರೆ.
ಎರಡೂ ಟೂರ್ನಮೆಂಟ್ಗಳ ಪಂದ್ಯಗಳ ಸಂಖ್ಯೆ ಮತ್ತು ಯೋಜನೆಗಳನ್ನು ಹೋಲಿಕೆ ಮಾಡಲಾಗದು. ಐಪಿಎಲ್ ಅನ್ನು ಭಾರತದ ಡೊಮೆಸ್ಟಿಕ್ ಟೂರ್ನಮೆಂಟ್ಗಳ ಜೊತೆ ಹೋಲಿಕೆ ಮಾಡುವುದು ಸರಿಯಾದ ಕ್ರಮವಲ್ಲ. ಐಪಿಎಲ್ ಫ್ರಾಂಚೈಸಿಗಳನ್ನು ಹೊಂದಿದೆ ಮತ್ತು ಅದು ವಿಶ್ವದ ಸೂಪರ್ ಸ್ಟಾರ್ ಕ್ರಿಕೆಟ್ಗಳು, ಕೋಚ್ಗಳು ಮತ್ತು ಬೆಂಬಲ ಸಿಬ್ಬಂದಿ ಬಂದು ತಮ್ಮ ಕೌಶಲ್ಯಗಳನ್ನು ತೋರಿಸುವ ವೇದಿಕೆಯಾಗಿದೆ.
ಆದರೆ, ಭಾರತದ ದೇಶಿ ಪಂದ್ಯಾವಳಿಗಳು ಸುಮಾರು 2000ಕ್ಕೂ ಹೆಚ್ಚು ಪಂದ್ಯವಾಳಿಗಳನ್ನು ಹೊಂದಿವೆ. ಆದರೆ, ಐಪಿಎಲ್ ಕೇವಲ 60 ಪಂದ್ಯಗಳನ್ನು ಹೊಂದಿದೆ. ಭಾರತದ ದೇಶಿ ಕ್ರಿಕೆಟ್ ದೊಡ್ಡ ಪ್ರಮಾಣದಲ್ಲಿದೆ ಮತ್ತು ವೈವಿಧ್ಯಮಯವಾಗಿದೆ. ಇಲ್ಲಿ ಅನೇಕ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಸಾಕಷ್ಟಿದ್ದಾಗ ಟೂರ್ನಮೆಂಟ್ ನಡೆಸುವುದು ಸುಲಭವಲ್ಲ ಎಂದು ಜಯ್ ಶಾ ರಣಜಿ ಕ್ರಿಕೆಟ್ ಆಯೋಜಿಸದೇ ಇರುವುದರ ಬಗ್ಗೆ ವಿವರಿಸಿದ್ದಾರೆ.
ಅಲ್ಲದೆ ಐಪಿಎಲ್ಗೆ ಕೇವಲ 7 ವಾರಗಳ ಸಾಕು. ಆದರೆ, ಡೊಮೆಸ್ಟಿಕ್ನಲ್ಲಿ ಪುರುಷ, ಮಹಿಳೆಯರ ಮತ್ತು ವಿವಿಧ ವಯೋಮಾನದ 38 ತಂಡಗಳ ಪಂದ್ಯಾವಳಿಗಳು ಮುಗಿಯಲು 6 ತಿಂಗಳಿಗೂ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಶಾ ತಿಳಿಸಿದ್ದಾರೆ.
ಇದನ್ನು ಓದಿ: ಪವರ್ ಪ್ಲೇನಲ್ಲಿ ಜಿಂಬಾಬ್ವೆ, ಸ್ಕಾಟ್ಲೆಂಡ್ಗಳಿಗಿಂತಲೂ ಕಳಪೆಯಾಗಿದೆ ಭಾರತದ ಬೌಲಿಂಗ್