ಲಂಡನ್: ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋಲು ಕಂಡಿರುವ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದ್ದು, ಆಗಸ್ಟ್ - ಸೆಪ್ಟೆಂಬರ್ ತಿಂಗಳಲ್ಲಿ ಈ ಸರಣಿ ಆರಂಭಗೊಳ್ಳಲಿದೆ. ಟೆಸ್ಟ್ ಪಂದ್ಯಗಳು ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಭವಿಷ್ಯ ನುಡಿದಿದ್ದಾರೆ.
ಇಂಗ್ಲೆಂಡ್ನ ಇಂತಹ ದುರ್ಬಲ ಬ್ಯಾಟಿಂಗ್ನಿಂದ ಟೀಂ ಇಂಡಿಯಾ ಸೋಲಿಸುವುದು ಕಠಿಣ ಎಂದು ಅವರು ಹೇಳಿದ್ದಾರೆ. ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಅಂತರದಿಂದ ಸೋಲು ಕಂಡಿದೆ.
ಅದಕ್ಕೆ ಮುಖ್ಯ ಕಾರಣವಾಗಿದ್ದು, ಆಂಗ್ಲರ ಕಳಪೆ ಬ್ಯಾಟಿಂಗ್ ಪ್ರದರ್ಶನ ಎಂದು ಅವರು ತಿಳಿಸಿದ್ದಾರೆ. ಆಗಸ್ಟ್ 4ರಿಂದ ಪ್ರಾರಂಭಗೊಳ್ಳಲಿರುವ ಸರಣಿಯಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ 3-1 ಅಂತರದಲ್ಲಿ ಸೋಲುಣಿಸಲಿದೆ ಎಂಬ ಭರವಸೆ ಇದೆ.
ಆದರೆ, ಇಂಗ್ಲೆಂಡ್ನ ಬ್ಯಾಟಿಂಗ್ ದುರ್ಬಲವಾಗಿದ್ದು, ಇದು ಅಷ್ಟೊಂದು ಸುಲಭವಲ್ಲ ಎಂದಿದ್ದಾರೆ. ತಂಡಕ್ಕೆ ಬಟ್ಲರ್, ಸ್ಟೋಕ್ಸ್ ಕಮ್ಬ್ಯಾಕ್ ಮಾಡಲಿದ್ದಾರೆ. ಆದರೆ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬದಲಾಗಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ಟೀಂ ಇಂಡಿಯಾದ ಸಾಮರ್ಥ್ಯದ ಬಗ್ಗೆ ಮತ್ತೆ ಮೈಕಲ್ ವಾನ್ ಕ್ಯಾತೆ!
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಡೆದಿದ್ದ ವೇಳೆ ಟೀಂ ಇಂಡಿಯಾ ವಿರುದ್ಧ ಅಪಹಾಸ್ಯ ಮಾಡಿದ್ದ ವಾನ್, "ಮಳೆಯಿಂದಾಗಿ ಇಂದು ಟೀಂ ಇಂಡಿಯಾ ಬಚಾವಾಗಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿಕೊಂಡಿದ್ದರು. ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.