ಕಾನ್ಪುರ: ನ್ಯೂಜಿಲ್ಯಾಂಡ್ ವಿರುದ್ಧ ಗುರುವಾರ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಆರಂಭಿಕ ಕುಸಿತ ಕಂಡಿರುವ ಹೊರತಾಗಿಯೂ ಪ್ರಾಬಲ್ಯಯುತ ಪ್ರದರ್ಶನ ತೋರುವ ಮೂಲಕ ದಿನದ ಗೌರವ ಪಡೆದಿದೆ.
ಇದಕ್ಕೆ ಕಾರಣವಾಗಿದ್ದು ಪದಾರ್ಪಣೆ ಬ್ಯಾಟರ್ ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್. ಈ ಇಬ್ಬರು ಅಜೇಯ ಶತಕದ ಜೊತೆಯಾಟ ನೀಡುವ ಮೂಲಕ ಭಾರತವನ್ನು ಸುಸ್ಥಿತಿಗೆ ತರುವಲ್ಲಿ ಯಶಸ್ವಿಯಾದರು. ಅಯ್ಯರ್ 75 ರನ್ ಗಳಿಸಿದರೆ, ಜಡೇಜಾ ಅಜೇಯ 50 ರನ್ಗಳಿಸಿದ್ದು ಭಾರತ 4 ವಿಕೆಟ್ ಕಳೆದುಕೊಂಡು 258 ರನ್ಗಳಿಸಿದೆ.
ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಖುಷಿ ಹಂಚಿಕೊಂಡಿರುವ ಅವರ ತಂದೆ, ತಮ್ಮ ಬಹುದಿನಗಳ ಕನಸು ಇಂದು ನನಸಾಗಿದೆ ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.
"ಟೆಸ್ಟ್ ಕ್ರಿಕೆಟ್ ನಿಜವಾದ ಕ್ರಿಕೆಟ್. ನಾನು ಶ್ರೇಯಸ್ ಟೆಸ್ಟ್ ಆಡಬೇಕೆಂದು ಸದಾ ಬಯಸುತ್ತಿದ್ದೆ. ಈ ದಿನ ಅದು ಈಡೇರಿದೆ. ನಾನು ಮತ್ತು ನನ್ನ ಮಡದಿ ಈ ದಿನಕ್ಕೋಸ್ಕರ ಕಾಯುತ್ತಿದ್ದೆವು. ಹಾಗಾಗಿ ಇಂದು ಬಹಳ ಖುಷಿಯಾಗಿದ್ದೇವೆ" ಎಂದು ಸೀನಿಯರ್ ಅಯ್ಯರ್ ಹೇಳಿದ್ದಾರೆ.
ಅಜಿಂಕ್ಯ ರಹಾನೆ ಪತ್ರಿಕಾಗೋಷ್ಠಿಯಲ್ಲಿ ಹೇಳುವವರೆಗೆ ನಮಗೆ ಶ್ರೇಯಸ್ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಬಗ್ಗೆ ಗೊತ್ತಿರಲಿಲ್ಲ. ತನ್ನ ಕ್ರಿಕೆಟ್ ಲೈಫ್ ಬಗ್ಗೆ ಆತ ಏನನ್ನೂ ನಮ್ಮ ಜೊತೆ ಹಂಚಿಕೊಳ್ಳುವುದಿಲ್ಲ. ಯಾವಾಗಲೂ ನಮಗೆ ಆಶ್ಚರ್ಯವನ್ನುಂಟು ಮಾಡಲು ಬಯಸುತ್ತಾನೆ. ಮಂಗಳವಾರ ನಾನೇ ಕರೆ ಮಾಡಿ ರೆಡ್ ಬಾಲ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಅವಕಾಶ ಪಡೆದಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೆ ಎಂದು ಸಂತೋಷ್ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.
5 ವರ್ಷ ಡಿಪಿಯನ್ನೇ ಬದಲಾಯಿಸದ ಸಂತೋಷ್ ಅಯ್ಯರ್
2017ರಲ್ಲಿ ಮೊದಲ ಬಾರಿಗೆ ಶ್ರೇಯಸ್ ಅಯ್ಯರ್ಗೆ ಟೆಸ್ಟ್ ತಂಡದಲ್ಲಿ ಬದಲೀ ಆಟಗಾರನಾಗಿ ಕರೆಬಂದಿತ್ತು. ಗಾಯಗೊಂಡಿದ್ದ ಕೊಹ್ಲಿ ಬದಲಿಗೆ ಶ್ರೇಯಸ್ ತಂಡ ಸೇರಿಕೊಂಡಿದ್ದ. ಆ ಸರಣಿಯಲ್ಲಿ ಆಡದಿದ್ದರೂ ಸರಣಿ ಗೆದ್ದ ನಂತರ ಟ್ರೋಫಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದ. ಆ ಫೋಟೋವನ್ನೇ ನಾನು ವಾಟ್ಸ್ಆ್ಯಪ್ ಡಿಪಿಯನ್ನಾಗಿ ಮಾಡಿಕೊಂಡಿದ್ದೇನೆ. ಇದುವರೆಗೂ ಅದನ್ನು ಬದಲಿಸಿಲ್ಲ. ಅವನು ಟೆಸ್ಟ್ ಕ್ರಿಕೆಟ್ ಆಡುವುದನ್ನು ನೋಡುವುದೇ ನನ್ನ ಕನಸಾಗಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪದಾರ್ಪಣೆ ಪಂದ್ಯದಲ್ಲಿ ಅರ್ಧಶತಕ: ಶ್ರೇಯಸ್ ಅಯ್ಯರ್ ಪ್ರಶಂಸಿಸಿದ ರೋಹಿತ್