ಮೆಲ್ಬೋರ್ನ್: ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣ(Sexting Scandal) ಸಂಬಂಧ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಆಸ್ಟ್ರೇಲಿಯಾ ಟೆಸ್ಟ್ ತಂಡದ(Australia Test cricket team) ನಾಯಕತ್ವಕ್ಕೆ ಟಿಮ್ ಪೇನ್ ದಿಢೀರ್ರಾಜೀನಾಮೆ(Tim Paine announced his resignation) ನೀಡಿದ್ದಾರೆ.
ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾವು ಇಂಗ್ಲೆಂಡ್ ವಿರುದ್ಧ ಮುಂಬರುವ ಆ್ಯಶಷ್ ಟೆಸ್ಟ್ ಸರಣಿಗೆ ನೂತನ ನಾಯಕನನ್ನು ಆಯ್ಕೆ ಮಾಡಲಿದೆ. ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ ಟಿಮ್ ಪೇನ್ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಕಳೆದ 2017ರಲ್ಲಿ ಮಹಿಳಾ ಸಹೋದ್ಯೋಗಿಗೆ ಟಿಮ್ ಪೇನ್ ಹಲವು ಬಾರಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ಆರೋಪ ಕೇಳಿಬಂದಿದೆ. ಈ ಪ್ರಕರಣ ಸಂಬಂಧ ಕ್ರಿಕೆಟ್ ಆಸ್ಟ್ರೇಲಿಯಾ ತನಿಖೆ ನಡೆಸುತ್ತಿದೆ.
ಆಸೀಸ್ ಪುರುಷರ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದೊಂದು ಕಠಿಣ ನಿರ್ಧಾರವಾಗಿದ್ದು, ಇದು ನಾನು, ನನ್ನ ಕುಟುಂಬದ ಪಾಲಿಗೆ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ದೃಷ್ಟಿಯಿಂದ ಸರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಮಹಿಳಾ ಸಹೋದ್ಯೋಗಿಗೆ ಸಂದೇಶ ಕಳುಹಿಸಿದ್ದರ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ. ಪ್ರಕರಣದ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಪೇನ್ ತಿಳಿಸಿದ್ದಾರೆ.
ಆ್ಯಶಷ್ ಟೆಸ್ಟ್ ಸರಣಿಯ(Ashes test series) ಆರಂಭಿಕ ಎರಡು ಪಂದ್ಯಗಳಿಗೆ 15 ಸದಸ್ಯರ ಆಸ್ಟ್ರೇಲಿಯಾ ತಂಡ ಈಗಾಗಲೇ ಪ್ರಕಟಗೊಂಡಿದೆ. ಆದರೀಗ ನಾಯಕತ್ವದಿಂದ ಪೇನ್ ಕೆಳಗಿಳಿದಿರುವ ಕಾರಣ ಯಾರು ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಸದ್ಯ ಟೆಸ್ಟ್ನಲ್ಲಿ ಉಪ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ವೇಗಿ ಪ್ಯಾಟ್ ಕಮಿನ್ಸ್(Pat Cummins) ಹೆಗಲಿಗೆ ಟೆಸ್ಟ್ ತಂಡದ ನಾಯಕತ್ವ ಬೀಳುವ ಸಾಧ್ಯತೆ ದಟ್ಟವಾಗಿದೆ. ಆ್ಯಶಷ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 8ರಂದು ದಿ ಗಬ್ಬಾ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ: IND vs NZ 2nd T20 : ರಾಂಚಿಯಲ್ಲಿ ಇಂದು ಭಾರತ-ಕಿವೀಸ್ 2ನೇ ಟಿ-20 ಫೈಟ್