ಕೊಲಂಬೊ: ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖಗಳು ಅನುಭವಗಳಿಂದ ಕಲಿಯಬೇಕಿದೆ. ಕಡಿಮೆ ಸ್ಕೋರ್ ಮಾಡಿದ್ದ ಸಂದರ್ಭದಲ್ಲಿ ಯಾವ ರೀತಿ ಆಟ ಆಡಬೇಕು ಎಂಬ ಕಲೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಕೊನೆಯ ಎರಡು ಟಿ- 20 ಅಂತಾರಾಷ್ಟ್ರೀಯ ಪಂದ್ಯದ ಬಗ್ಗೆ ಉಲ್ಲೇಖಿಸಿ ಅವರು ಮಾತನಾಡಿದರು.
ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಮೂರು ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವು 1-2 ಅಂತರದಿಂದ ಸೋಲು ಕಂಡಿದೆ. ಲೆಗ್ ಸ್ಪಿನ್ನರ್ ವನಿಂದು ಹಸರಂಗ ನೇತೃತ್ವದಲ್ಲಿ ಗುಣಮಟ್ಟದ ಸ್ಪಿನ್ ಬೌಲಿಂಗ್ ದಾಳಿಗೆ ಭಾರತದ ದೇವದತ್ತ್ ಪಡಿಕ್ಕಲ್, ರುತುರಾಜ್ಡ್ ಗಾಯಕ್ವಾಡ್, ನಿತೀಶ್ ರಾಣಾ ಮತ್ತು ಸಂಜು ಸ್ಯಾಮ್ಸನ್ ಅಕ್ಷರಶಃ ಹೋರಾಡಬೇಕಾಯಿತು.
"ನಮ್ಮ ತಂಡದ ಸದಸ್ಯರು ಸಣ್ಣವರಾಗಿರುವುದರಿಂದ ನಾನು ನಿರಾಸೆಗೊಳ್ಳುವುದಿಲ್ಲ. ಅವರು ಈ ರೀತಿಯ ಪರಿಸ್ಥಿತಿಗಳು ಮತ್ತು ಬೌಲಿಂಗ್ ಗುಣಮಟ್ಟಕ್ಕೆ ಒಡ್ಡಿಕೊಂಡಾಗ ಮಾತ್ರ ಕಲಿಯಲು ಸಾಧ್ಯ. ಇನ್ನು ಶ್ರೀಲಂಕಾ ತಂಡದ ಬೌಲಿಂಗ್ ದಾಳಿಯು ಅಂತಾರಾಷ್ಟ್ರೀಯ ಮಟ್ಟದ್ದಾಗಿದೆ" ಎಂದು ದ್ರಾವಿಡ್ ಹೇಳಿದರು.