ನವದೆಹಲಿ: ನಿವೃತ್ತ ಅಂತಾರಾಷ್ಟ್ರೀಯ ಕ್ರಿಕೆಟಿಗರು ಪಾಲ್ಗೊಳ್ಳುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟೂರ್ನಮೆಂಟ್ನ 2ನೇ ಆವೃತ್ತಿಯಿಂದ ಭಾರತ ತಂಡದ ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಆಡದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಸಚಿನ್ ಸೇರಿದಂತೆ ಮೊದಲ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ವಿವಿಧ ದೇಶಗಳ ಕ್ರಿಕೆಟಿಗರಿಗೆ ಆಯೋಜಕರು ಒಪ್ಪಂದದ ಪ್ರಕಾರ ಹಣವನ್ನು ಸಂಪೂರ್ಣ ಪಾವತಿಸದ ಕಾರಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಚಿನ್ ತೆಂಡೂಲ್ಕರ್ ಭಾರತ ಲೆಜೆಂಡ್ಸ್ ತಂಡದ ಪರ ನಾಯಕನಾಗಿ ಮೊದಲ ಆವೃತ್ತಿಯಲ್ಲಿ ಆಡಿದ್ದರು. ಭಾರತ ತಂಡ ಚಾಂಪಿಯನ್ ಆಗಿತ್ತು. ಆದರೆ ಒಪ್ಪಂದದ ಪ್ರಕಾರ ತಮಗೆ ಸೇರಬೇಕಾದಂತಹ ಹಣ ಪಾವತಿಯಾಗದ ಕಾರಣ, ಈ ಆವೃತ್ತಿಯ ಭಾಗವಾಗದಿರಲು ತೀರ್ಮಾನಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಈ ಟೂರ್ನಮೆಂಟ್ನ ಬ್ರಾಂಡ್ ಅಂಬಾಸಿಟರ್ ಕೂಡ ಆಗಿದ್ದರು.
ಬಾಂಗ್ಲಾದೇಶದ ಮಾಧ್ಯಮವೊಂದರ ವರದಿಯ ಪ್ರಕಾರ ಕಳೆದ ಆವೃತ್ತಿಯಲ್ಲಿ ಭಾಗವಹಿಸಿದ್ದ ಬಾಂಗ್ಲಾದೇಶ ಲೆಜೆಂಡ್ಸ್ ತಂಡದ ಖಲೀದ್ ಮಹ್ಮುದ್, ಖಲೀದ್ ಮಸುದ್, ಮಹ್ರಾಬ್ ಹುಸೇನ್, ರಜಿನ್ ಸಲೆಹ್, ಹನ್ನಾಮ್ ಸರ್ಕಾರ್ ಮತ್ತು ನಫೀಸ್ ಇಕ್ಬಾಲ್ಗೆ ಆಯೋಜಕರು ಯಾವುದೇ ಹಣವನ್ನು ನೀಡಿಲ್ಲ ಎಂದು ತಿಳಿದುಬಂದಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಮೂಲವೊಂದು ಪಿಟಿಐಗೆ ಸಚಿನ್ ಈ ಬಾರ್ RSWS ಟೂರ್ನೆಮೆಂಟ್ನಲ್ಲಿ ಭಾಗವಹಿಸುತ್ತಿಲ್ಲ ಎಂದು ಖಚಿತಪಡಿಸಿದೆ. ವೇತನದ ಬಗ್ಗೆ ಕೇಳಿದ್ದಕ್ಕೆ, ಹೌದು, ಸಚಿನ್ ಸೇರಿದಂತೆ ಲೀಗ್ನಲ್ಲಿ ಭಾಗವಹಿಸಿದ್ದ ಹಲವಾರು ಕ್ರಿಕೆಟಿಗರು ಆಯೋಜಕರಿಂದ ಹಣ ಪಡೆದಿಲ್ಲ. ಪ್ರಧಾನ ಸಂಘಟಕರಾಗಿದ್ದ ರವಿ ಗಾಯಕ್ವಾಡ್ ಅವರನ್ನು ಸಂಪರ್ಕಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
2020ರಲ್ಲಿ ನಡೆದಿದ್ದ ಈ ಲೀಗ್ನ ಒಪ್ಪಂದದ ಪ್ರಕಾರ ಟೂರ್ನಮೆಂಟ್ನಲ್ಲಿ ಆಡಲು ಸಹಿ ಮಾಡಿದಾಗ ವೇತನದ 10ರಷ್ಟನ್ನು ಹಣವನ್ನು ನೀಡುವುದು, ಶೇ 40ರಷ್ಟನ್ನು ಫೆಬ್ರವರಿ 25ರೊಳಗೆ ಮತ್ತು ಉಳಿದ 50 ಭಾಗವನ್ನು ಮಾರ್ಚ್ 31ರೊಳಗೆ ನೀಡಲಾಗುವುದೆಂದ ಆಯೋಜಕರು ತಿಳಿಸಿದ್ದರೆಂದು ತಿಳಿದುಬಂದಿದೆ. ಈ ಬಗ್ಗೆ ಗಾಯಕ್ವಾಡ್ ಹೇಳಿಕೆಗಾಗಿ ಪಿಟಿಐ ಸಂಪರ್ಕಿಸಲು ಪ್ರಯತ್ನಿಸಿತಾದರೂ ಅವರು ಫೋನ್ ಅಥವಾ ಸಂದೇಶಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ:ಭಾರತಕ್ಕೆ 174 ರನ್ಗಳ ಭರ್ಜರಿ ಜಯ.. ಐರ್ಲೆಂಡ್ ಸೋಲಿಸಿ ಸೂಪರ್ ಲೀಗ್ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಭಾರತ!