ಅಹ್ಮದಾಬಾದ್: ವಿರಾಟ್ ಕೊಹ್ಲಿ ಶತಕ ಗಳಿಸದೇ ಇರಬಹುದು ಆದರೆ ಅವರು ಫಾರ್ಮ್ ಕಳೆದುಕೊಂಡಿಲ್ಲ, ಅವರ ಫಾರ್ಮ್ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲದೇ ಅವರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಯಾವುದೇ ಸಲಹೆ ಬೇಕಿಲ್ಲ ಎಂದು ನಾಯಕ ರೋಹಿತ್ ಶರ್ಮಾ ವಿಂಡೀಸ್ ವಿರುದ್ಧದ ಕೊನೆಯ ಪಂದ್ಯ ಗೆದ್ದ ಬಳಿಕ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡ 96 ರನ್ಗಳಿಂದ ಗೆದ್ದು, 3-0ದಿಂದ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಆದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ ಮೂರು ಪಂದ್ಯಗಳಲ್ಲಿ 8, 18 ಮತ್ತು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಕೊಹ್ಲಿಗೆ ಆತ್ಮವಿಶ್ವಾಸ ಕೊರತೆಯಿದೆಯೇ? ಎಂದು ಕೇಳಿದ್ದಕ್ಕೆ ರೋಹಿತ್ ಶರ್ಮಾ ಅದರ ಅಗತ್ಯವಿಲ್ಲ ಎಂದಿದ್ದಾರೆ.
ವಿರಾಟ್ ಕೊಹ್ಲಿಗೆ ಆತ್ಮವಿಶ್ವಾಸದ ಅಗತ್ಯವಿದೆಯೇ? ಒಂದು ವೇಳೆ ಕೊಹ್ಲಿಗೆ ಆತ್ಮವಿಶ್ವಾಸದ ಅಗತ್ಯವಿದೆ ಎಂದರೆ, ತಂಡದಲ್ಲಿ ಮತ್ಯಾರು ವಿಶ್ವಾಸ ಹೊಂದಿದ್ದಾರೆ? ಅವರು ದೀರ್ಘಕಾಲದಿಂದ ಶತಕ ಗಳಿಸದೇ ಇರಬಹುದು, ಆದರೆ ಅವರು ಅರ್ಧಶತಕಗಳನ್ನು ಗಳಿಸುತ್ತಿದ್ದಾರೆ ಎಂದು ನನಗೆ ತಿಳಿದಿದೆ.
ದಕ್ಷಿಣ ಆಫ್ರಿಕಾದಲ್ಲಿಯೂ ಅವರು 3 ಪಂದ್ಯಗಳಲ್ಲಿ 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹಾಗಾಗಿ ಅವರಿಗೆ ಯಾವುದೇ ಹೆಚ್ಚುವರಿ ಆತ್ಮವಿಶ್ವಾಸದ ಅಗತ್ಯವಿಲ್ಲ. ಅವರು ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ಅವರ ಫಾರ್ಮ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ:590 ಪ್ಲೇಯರ್ಸ್, 561. 5ಕೋಟಿ ರೂ... IPL ಮೆಗಾ ಹರಾಜು ಬಗ್ಗೆ ಕ್ರಿಕೆಟ್ ಪ್ರೇಮಿಗಳು ತಿಳಿದುಕೊಳ್ಳಬೇಕಾಗಿದ್ದೇನು!?