ದುಬೈ: ಪಾಕ್ ವಿರುದ್ಧದ ನಾವು ಎಲ್ಲಿ ಎಡವಿದೆವು ಹಾಗೂ ಯಾವಾಗ ತಪ್ಪಾಯಿತು ಎಂಬ ಬಗ್ಗೆ ನಮಗೆ ಗೊತ್ತಿದೆ. ಮೊದಲ ಆರು ಓವರ್‌ಗಳಲ್ಲಿ ಪಾಕಿಸ್ತಾನದ ಅದ್ಭುತ ಬೌಲಿಂಗ್ನಿಂದ ನಾವು 20-25ರಷ್ಟು ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆರಂಭದಲ್ಲೇ 20 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಾಗ ಕಷ್ಟವಾಯಿತು ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.
ಐಸಿಸಿ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಪಾಕ್ ವಿರುದ್ಧದ ಸೋಲಿನ ಬಳಿಕ ಕೊಹ್ಲಿ ಪ್ರತಿಕ್ರಿಯೆ ನೀಡಿದರು. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನವು ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದ್ದು, ವಿಶ್ವಕಪ್ನಲ್ಲಿ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಟೀಂ ಇಂಡಿಯಾ ಮೊದಲ ಬಾರಿಗೆ ಮುಖಭಂಗ ಅನುಭವಿಸಿದೆ.
ಒಂದು ತಂಡವಾಗಿ, ಮೈದಾನದಲ್ಲಿನ ಪರಿಸ್ಥಿತಿಯ ವಾಸ್ತವತೆ ಏನೆಂದು ನಾವು ಅರ್ಥಮಾಡಿಕೊಳ್ಳಬೇಕು. ನಮಗೆ 20-25 ಹೆಚ್ಚುವರಿ ರನ್ಗಳ ಅಗತ್ಯವಿತ್ತು. ಆದರೆ ಆರಂಭಿಕ ಓವರ್‌ಗಳಲ್ಲಿ ಎದುರಾಳಿ ಬೌಲರ್ಗಳು ನಮಗೆ ರನ್ ಗಳಿಸುವ ಅವಕಾಶ ನೀಡಲಿಲ್ಲ. ಒಂದು ತಂಡವಾಗಿ ನಾವು ಎಲ್ಲಿ ವಿಫಲರಾದೆವು ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಟೂರ್ನಿಯಲ್ಲಿ ಇನ್ನೂ ಹಲವು ಪಂದ್ಯಗಳಿದ್ದು, ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದು ಕೊಹ್ಲಿ ಹೇಳಿದರು.
ಪಿಚ್ ಬ್ಯಾಟಿಂಗ್ಗೆ ಹೆಚ್ಚು ಅನುಕೂಲಕರವಾಗಿದ್ದಾಗ ಉತ್ತಮ ಆರಂಭ ಪಡೆದು, ಗುರಿಯತ್ತ ತಲುಪಲು ಆತ್ಮವಿಶ್ವಾಸ ಮೂಡುತ್ತದೆ. ಅಲ್ಲದೆ, ಪಾಕಿಸ್ತಾನದ ಇನ್ನಿಂಗ್ಸ್‌ನ ದ್ವಿತೀಯಾರ್ಧದಲ್ಲಿ ಹೆಚ್ಚು ಇಬ್ಬನಿ ಕಂಡುಬಂದಿತು. ಹೀಗಾಗಿ ಬ್ಯಾಟರ್ಗಳ ಸುಲಲಿತವಾಗಿ ಸ್ಟ್ರೈಕ್ ಬದಲಾಯಿಸುತ್ತ ರನ್ ಪೇರಿಸುವಲ್ಲಿ ಯಶ ಕಂಡರು. ಆದರೆ ಡಾಟ್ ಬಾಲ್ಗಳ ಮೂಲಕ ಒತ್ತಡ ಹೇರಲು ಕೂಡ ನಮ್ಮ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. ನಿಧಾನಗತಿಯ ಎಸೆತಗಳೂ ಕೂಡ ವಿಕೆಟ್ ತಂದುಕೊಡಲಿಲ್ಲ. ಈ ಎಲ್ಲ ಸಣ್ಣಪುಟ್ಟ ಸಂಗತಿಗಳೂ ಕೂಡ ಪಂದ್ಯದ ಫಲಿತಾಂಶದಲ್ಲಿ ದೊಡ್ಡ ಬದಲಾವಣೆ ತರಬಲ್ಲವು. ದ್ವಿತೀಯಾರ್ಧದಲ್ಲಿ ಇಬ್ಬನಿ ಕಂಡುಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ತಂಡ ಬೃಹತ್ ಮೊತ್ತ ಕಲೆಹಾಕುವುದು ಬಹಳ ಅಗತ್ಯ ಎಂದು ಕೊಹ್ಲಿ ಅಭಿಪ್ರಾಯಪಟ್ಟರು.
ಟೀಂ ಇಂಡಿಯಾಗೆ ಆರಂಭಿಕ ಆಘಾತ ನೀಡಿದ ಪಾಕ್ ವೇಗಿ ಶಾಹೀನ್ ಶಾ ಅಫ್ರಿದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿರಾಟ್, ಶಾಹೀನ್ ಹೊಸ ಚೆಂಡಿನೊಂದಿಗೆ ಚೆನ್ನಾಗಿ ಬೌಲ್ ಮಾಡಿದರು. ಟಿ-20 ಕ್ರಿಕೆಟ್ನಲ್ಲಿ ವಿಕೆಟ್ ಪಡೆಯಲು ಯೋಜನೆಗಳು ಅಗತ್ಯ. ಅದಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ್ದರಿಂದ ಯಶಸ್ಸು ಕಂಡರು ಎಂದು ಹೇಳಿದರು.
ವಿಶ್ವಕಪ್ ಟೂರ್ನಿಯ ಮುಂದಿನ ಪಂದ್ಯದಲ್ಲಿ ಭಾರತವು ದುಬೈನಲ್ಲಿ ಅಕ್ಟೋಬರ್ 31 ರಂದು ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ: ರೋಹಿತ್ ಅವರನ್ನ ಕೈಬಿಡುತ್ತೀರಾ? ಪಾಕ್ ಪತ್ರಕರ್ತನ ಪ್ರಶ್ನೆಗೆ ಈ ರೀತಿ ತಿರುಗೇಟು ನೀಡಿದ ಕೊಹ್ಲಿ!