ಮೆಲ್ಬೋರ್ನ್(ಆಸ್ಟ್ರೇಲಿಯಾ): ಕೊನೆಯ ಪಂದ್ಯದವರೆಗೂ ಕಾಪಿಟ್ಟಿದ್ದ ಸೆಮಿಫೈನಲ್ ಕೌತುಕ ಮುಗಿದಿದೆ. ಗ್ರೂಪ್ 1 ರಲ್ಲಿ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಸೆಮೀಸ್ಗೆ ಟಿಕೆಟ್ ಪಡೆದಿದ್ದರೆ, ಎರಡನೇ ಗ್ರೂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿವೆ. ನವೆಂಬರ್ 9 ರಂದು ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ಎದುರಾದರೆ, 10 ರಂದು ಭಾರತ ಮತ್ತು ಇಂಗ್ಲೆಂಡ್ ಸೆಣಸಾಡಲಿವೆ.
ಇಂದು ನಡೆದ ಸೂಪರ್ 12 ಹಂತದ ಕೊನೆಯ ಪಂದ್ಯಗಳು ಅಚ್ಚರಿಯ ಫಲಿತಾಂಶ ತಂದಿವೆ. ಬಲಿಷ್ಠ ಭಾರತವನ್ನು ಸೋಲಿಸಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಶಿಶು ನೆದರ್ಲ್ಯಾಂಡ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತು. ಇದು ಕ್ರಿಕೆಟ್ ಲೆಕ್ಕಾಚಾರಗಳನ್ನೇ ತಲೆಕೆಳಗೆ ಮಾಡಿದೆ. ಬಳಿಕ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಅರ್ಹ ಜಯ ಸಾಧಿಸಿ ಮುಂದಿನ ಹಂತಕ್ಕೆ ಬಡ್ತಿ ಪಡೆಯಿತು.
ಭಾರತಕ್ಕೆ ನೇರ ಪ್ರವೇಶ: ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲ್ಯಾಂಡ್ಸ್ ಗೆಲುವು ಸಾಧಿಸುತ್ತಿದ್ದಂತೆ ಗ್ರೂಪ್ 2 ಅಗ್ರಸ್ಥಾನಿಯಾಗಿದ್ದ ಭಾರತ ಸೆಮಿಫೈನಲ್ಗೆ ನೇರಪ್ರವೇಶ ಪಡೆಯಿತು. ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಕೊನೆಯ ಪಂದ್ಯ ಸೋತರೂ ಭಾರತಕ್ಕೆ ಯಾವುದೇ ಆತಂಕವಿಲ್ಲ.
ಅದೃಷ್ಟದಾಟದಲ್ಲಿ ಗೆದ್ದ ಪಾಕಿಸ್ತಾನ: ಪಾಕಿಸ್ತಾನ ತಂಡ ವಿಶ್ವಕಪ್ನ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಮಂಡಿಯೂರಿತ್ತು. ಬಳಿಕ ಅಚ್ಚರಿ ಎಂಬಂತೆ ಜಿಂಬಾಬ್ವೆ ವಿರುದ್ಧ 1 ರನ್ನಿಂದ ಸೋತು ಭಾರಿ ಟೀಕೆಗೆ ಗುರಿಯಾಗಿತ್ತು. ಸೆಮಿಫೈನಲ್ಗೆ ತಲುಪುವುದು ಕಷ್ಟ ಎಂದೇ ಎಣಿಸಲಾಗಿದ್ದ ಪಾಕಿಸ್ತಾನ, ಮರು ಹೋರಾಟ ಮಾಡಿ ಕೊನೆಯ ಮೂರು ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ 6 ಅಂಕ ಗಳಿಸಿತು.
ದಕ್ಷಿಣ ಆಫ್ರಿಕಾ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದು, ಅದರ ಸ್ಥಾನಕ್ಕೆ ಪಾಕಿಸ್ತಾನ ಎಂಟ್ರಿ ನೀಡಿತು. ಸೆಮೀಸ್ ತಲುಪಲು ಅವಕಾಶವಿದ್ದ ಬಾಂಗ್ಲಾದೇಶ ಪಾಕಿಸ್ತಾನ ವಿರುದ್ಧ ಸೋತು ವಿಶ್ವಕಪ್ ಅಭಿಯಾನ ಮುಗಿಸಿತು.
ಕ್ರಿಕೆಟ್ ಶಿಶುಗಳಿಂದ ಬಲವಾದ ಹೊಡೆತ!: ಈ ಬಾರಿಯ ಟಿ20 ವಿಶ್ವಕಪ್ ಹಲವು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾದವು. ಗುಂಪು ಹಂತದಲ್ಲಿ ಬಲಿಷ್ಠ ತಂಡಗಳಿಗೆ ಚಳ್ಳೆಹಣ್ಣು ತಿನ್ನಿಸಿವೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲುವ ಮೂಲಕ ನೆದರ್ಲ್ಯಾಂಡ್ಸ್ ಆ ತಂಡವನ್ನು ವಿಶ್ವಕಪ್ ರೇಸ್ನಿಂದಲೇ ಹೊರಹಾಕಿದರೆ, ಐರ್ಲೆಂಡ್ ತಂಡ ಇಂಗ್ಲೆಂಡ್ಗೆ ಸೋಲುಣಿಸಿತ್ತು. ಗ್ರೂಪ್ 2 ರಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನ ವಿರುದ್ಧ ಐತಿಹಾಸಿಕ 1 ರನ್ನಿಂದ ಗೆಲುವು ಸಾಧಿಸಿ ಸೆಮೀಸ್ ಹಾದಿಗೆ ಮುಳ್ಳಾಗಿತ್ತು.
ಸೆಮಿಫೈನಲ್ ತಂಡಗಳು ಹೀಗಿವೆ:
- ನ್ಯೂಜಿಲ್ಯಾಂಡ್
- ಇಂಗ್ಲೆಂಡ್
- ಭಾರತ
- ಪಾಕಿಸ್ತಾನ
ಇದನ್ನೂ ಓದಿ: T20 World Cup: ನೆದರ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಗೆ ಸೋಲು... ಸೆಮಿಫೈನಲ್ಗೆ ಭಾರತ ಎಂಟ್ರಿ