ಹೈದರಾಬಾದ್: ಆಸ್ಟ್ರೇಲಿಯಾದಲ್ಲಿ ವೇಗಿಗಳಿಗೆ ಹೇಳಿ ಮಾಡಿಸಿದ ಪಿಚ್ಗಳಿವೆ. ಇಲ್ಲಿ ವೇಗದ ಬೌಲಿಂಗ್ಗೆ ಹೆಚ್ಚು ಶಕ್ತಿಯಿದೆ. ಈ ವಿಶ್ವಕಪ್ನಲ್ಲಿ ಪೇಸ್, ಸ್ವಿಂಗ್, ಸೀಮ್ ಮೂಲಕ ಬ್ಯಾಟರ್ಗಳನ್ನು ಬೆದರಿಸುವ ಐವರು ಬೌಲರ್ಗಳನ್ನು ಮಾಜಿ ವೇಗಿ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ಹೆಸರಿಸಿದ್ದಾರೆ.
ಈ ಐವರು ವಿಶ್ವಕಪ್ನಲ್ಲಿ ಹೆಚ್ಚು ಪ್ರಭಾವ ಬೀರಲಿದ್ದಾರೆ. ಎದುರಿಗಿರುವ ಬ್ಯಾಟರ್ಗಳು ಎಂಥವರೇ ಇದ್ದರೂ ನಿರ್ಭೀತಿಯಿಂದ ಬೌಲಿಂಗ್ ಮಾಡಬಲ್ಲರು ಎಂದು ಹೇಳಿದ್ದಾರೆ.
ಕಗಿಸೊ ರಬಾಡ ಮತ್ತು ಅನ್ರಿಚ್ ನೋಕಿಯಾ (ದಕ್ಷಿಣ ಆಫ್ರಿಕಾ): ವಿಶ್ವಕಪ್ನಲ್ಲಿ ಡಾರ್ಕ್ಹಾರ್ಸ್ ಎಂದೇ ಕುಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾ ತಂಡದ ಇಬ್ಬರು ಬೌಲರ್ಗಳಾದ ಕಗಿಸೊ ರಬಾಡ ಮತ್ತು ಅನ್ರಿಚ್ ನೋಕಿಯಾ ಬೌಲಿಂಗ್ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಶಕ್ತಿ ಇದೆ. ಇಬ್ಬರ ಸಂಯೋಜಿತ ಬೌಲಿಂಗ್ ತಂಡಕ್ಕೆ ನೆರವಾಗಲಿದೆ. ಅಲ್ಲದೇ ಇದು ವಿಶ್ವಕಪ್ ಗೆಲ್ಲಲೂ ನೆರವಾಗಲಿದೆ ಎಂದು ಭಾವಿಸುತ್ತೇನೆ.
ಆಸ್ಟ್ರೇಲಿಯಾದಂತಹ ವೇಗದ ನಾಡಿನಲ್ಲಿ ರಬಾಡ, ನೋಕಿಯಾ ಯಶಸ್ವಿಯಾಗಲಿದ್ದಾರೆ. ಅವರು ಉತ್ತಮ ಬೌಲಿಂಗ್ ಕೌಶಲ್ಯವನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾಕ್ಕೆ ಬಂದಾಗಲೆಲ್ಲ ರಬಾಡ ಗುಣಮಟ್ಟದ ಪ್ರದರ್ಶನ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲುವಲ್ಲಿ ಇವರ ಪಾತ್ರ ಮುಖ್ಯವಾಗಿರಲಿದೆ.
ಮಾರ್ಕ್ ವುಡ್ (ಇಂಗ್ಲೆಂಡ್): ಇಂಗ್ಲೆಂಡ್ ಶರವೇಗದ ಬೌಲರ್ ಮಾರ್ಕ್ವುಡ್ ವಿಶ್ವಕಪ್ನಲ್ಲಿ ನನ್ನ ಗಮನ ಸೆಳೆದ ವೇಗಿ. 4 ಓವರ್ಗಳ ಸ್ಪೆಲ್ನ 24 ಎಸೆತಗಳನ್ನೂ 140 ಕಿಮೀ ವೇಗದಲ್ಲಿ ಎಸೆಯುವ ಆಟಗಾರ. ಈ ವೇಗದಿಂದಲೇ ಬ್ಯಾಟರ್ಗಳನ್ನು ದಂಗು ಬಡಿಸಿದ್ದಾರೆ. ಇದು ಆತನ ಶಕ್ತಿಯಾಗಿದೆ. ಯಾರ್ಕರ್, ಬೌನ್ಸರ್ಗಳಿಂದಲೇ ಬ್ಯಾಟರ್ಗಳನ್ನು ಕಾಡುತ್ತಾರೆ. ಇದರಿಂದಾಗಿ ಮಾರ್ಕ್ವುಡ್ ವಿಶ್ವಕಪ್ನಲ್ಲಿ ತನ್ನ ಛಾಪು ಮೂಡಿಸಲಿದ್ದಾರೆ.
ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ): ಮಿಚೆಲ್ ಅದ್ಭುತ ವೇಗದ ಬೌಲರ್. ತವರು ನೆಲದ ಸಂಪೂರ್ಣ ಲಾಭ ಪಡೆಯಲಿದ್ದಾರೆ. ಈ ಹಿಂದೆ ವಿಶ್ವಕಪ್ ಗೆದ್ದ ತಂಡದಲ್ಲೂ ಅವರಿದ್ದರು. ಈ ಅನುಭವ ಅವರಿಗೆ ನೆರವಾಗಲಿದೆ. ಆಸೀಸ್ನ ಅತಿದೊಡ್ಡ ವಿಕೆಟ್ ಟೇಕರ್, ಎಡಗೈ ಬೌಲರ್ ಆಗಿದ್ದಾರೆ. ಅವರ ಅಸಾಧಾರಣ ಬೌಲಿಂಗ್ ಶೈಲಿ ಬ್ಯಾಟರ್ಗಳಿಗೆ ಸವಾಲಾಗಲಿದೆ.
ಶಾಹೀನ್ ಅಫ್ರಿದಿ (ಪಾಕಿಸ್ತಾನ): ಪಾಕಿಸ್ತಾನದ ಖತರ್ನಾಕ್ ವೇಗಿ ಶಾಹೀನಾ ಶಾ ಅಫ್ರಿದಿ ವಿಶ್ವಕಪ್ನ ಪ್ರಭಾವಿ ಬೌಲರ್ಗಳಲ್ಲಿ ಒಬ್ಬರಾಗಲಿದ್ದಾರೆ. ಹಿಂದಿನ ಟಿ20 ವಿಶ್ವಕಪ್‌ನಲ್ಲೂ ಅವರ ಆಟವನ್ನು ಗಮನಿಸಿದ್ದೇನೆ. ವೇಗದ ಜೊತೆಗೆ ಉತ್ತಮ ಕೌಶಲ್ಯ ಹೊಂದಿದ್ದಾರೆ. ಬಲಗೈ ಬ್ಯಾಟರ್ಗಳಿಗೆ ಇವರು ಸವಾಲಾಗುವುದು ಖಂಡಿತ. ನಿಧಾನಗತಿ, ಅತಿ ವೇಗದ ಬೌನ್ಸರ್ ಮತ್ತು ಯಾರ್ಕರ್ಗಳಿಂದ ಬ್ಯಾಟರ್ಗಳನ್ನು ಕಾಡಲಿದ್ದಾರೆ.
ಓದಿ: ಮಳೆಗೆ ವಿಶ್ವಕಪ್ನ 4 ಪಂದ್ಯಗಳು ಡಮಾರ್.. ತಾಳ ತಪ್ಪುತ್ತಾ ತಂಡಗಳ ಸೆಮೀಸ್ ಲೆಕ್ಕಾಚಾರ?