ದುಬೈ: ಐಸಿಸಿ ಟಿ-20 ವಿಶ್ವಕಪ್ ಮಹಾಸಮರ ಪ್ರಾರಂಭಗೊಂಡಿದ್ದು, ಈಗಾಗಲೇ ಸೂಪರ್-12 ಹಂತದ ಪಂದ್ಯಗಳು ನಡೆಯುತ್ತಿವೆ. ಇದರ ಮಧ್ಯೆ ಅನೇಕ ಮಾಜಿ ಕ್ರಿಕೆಟರ್ಸ್ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್ ಬ್ರೆಟ್ ಲೀ ಕೂಡ ತಮ್ಮ ಮನದಾಳ ಹೊರಹಾಕಿದ್ದಾರೆ.
ಐಸಿಸಿ ಟಿ-20 ವಿಶ್ವಕಪ್ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಕನ್ನಡಿಗ ಕೆ.ಎಲ್ ರಾಹುಲ್ ಟಾಪ್ ಸ್ಕೋರರ್ ಆಗಲಿದ್ದಾರೆ ಎಂಬ ಭವಿಷ್ಯ ನುಡಿದಿದ್ದಾರೆ. ಜೊತೆಗೆ ವೇಗಿ ಮೊಹಮ್ಮದ್ ಶಮಿ ಅತಿ ಹೆಚ್ಚು ವಿಕೆಟ್ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದಿದ್ದಾರೆ.
ಟೀಂ ಇಂಡಿಯಾದಲ್ಲಿ ಟಾಪ್ ಫೈವ್ ಬ್ಯಾಟರ್ ಹಾಗೂ ಬೌಲರ್ಗಳು ಉತ್ತಮ ಲಯದಲ್ಲಿದ್ದು, ಕೆಎಲ್ ರಾಹುಲ್ ಅತಿ ಹೆಚ್ಚು ಸ್ಕೋರ್ ಹಾಗೂ ಶಮಿ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದುಕೊಳ್ಳಲಿದ್ದಾರೆ. ವಿರಾಟ್ ಪಡೆ ಆಡುವ ಎಲ್ಲ ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದುಕೊಂಡರೆ ಖಂಡಿತವಾಗಿ ವಿಶ್ವಕಪ್ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಮುಂಚೂಣಿಯಲ್ಲಿರಲಿದೆ ಎಂದಿದ್ದಾರೆ.
ಇದನ್ನೂ ಓದಿರಿ: ವಿಶ್ವಕಪ್ ಗೆಲ್ಲಲು ಭಾರತವೇ ಫೆವರೀಟ್ ತಂಡ, UAE ಕಂಡೀಷನ್ ಅವರಿಗೆ ಸೂಕ್ತವಾಗಿದೆ: ಇಂಜಮಾಮ್
ಆಸ್ಟ್ರೇಲಿಯಾ ಪರ ಬ್ಯಾಟ್ ಬೀಸಿದ ಬ್ರೆಟ್ ಲೀ
ಇದೇ ವೇಳೆ, ಆಸ್ಟ್ರೇಲಿಯಾ ಪರ ಬ್ಯಾಟ್ ಬೀಸಿರುವ ಮಾಜಿ ವೇಗದ ಬೌಲರ್, ಕಾಂಗರೂ ಪಡೆ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಸ್ಟಾರ್ಕ್ ಉತ್ತಮ ಆರಂಭ ಪಡೆದುಕೊಳ್ಳಬೇಕಾಗಿದೆ ಎಂದರು.
ಟಿ-20 ವಿಶ್ವಕಪ್ನಲ್ಲಿ ಭಾರತ ಅಕ್ಟೋಬರ್ 24ರಂದು ಪಾಕ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ಅಭಿಯಾನ ಆರಂಭ ಮಾಡಲಿದ್ದು, ಆಸ್ಟ್ರೇಲಿಯಾ ತಂಡ ಅಕ್ಟೋಬರ್ 23ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.