ರಾಂಚಿ: ಜಾರ್ಖಂಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ವಿಶ್ವಕಪ್ ಬಳಿಕ ನಡೆದ ಮೊದಲ ಅಂತಾರಾಷ್ಟ್ರೀಯ ಟಿ-20 ಸರಣಿಯನ್ನು ಕೈವಶ ಮಾಡಿಕೊಂಡಿತು. ಕಿವೀಸ್ ನೀಡಿದ 154 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, 17.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ತಂಡದಲ್ಲಿ ಪದಾರ್ಪಣೆ ಪಂದ್ಯದಲ್ಲೇ ಹರ್ಷಲ್ ಪಟೇಲ್ 25 ರನ್ಗಳನ್ನು ನೀಡಿ 2ವಿಕೆಟ್ ಪಡೆದು ಮಿಂಚಿದ್ದರು. ಅವರ ಉತ್ತಮ ಆಟಕ್ಕೆ ‘ಪ್ಲೇಯರ್ ಆಫ್ ದಿ ಮ್ಯಾಚ್’(Player of the Match) ಪ್ರಶಸ್ತಿ ಸಹ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ಸಹ ಆಟಗಾರ ಎಬಿ ಡಿವಿಲಿಯರ್ಸ್(AB de Villiers)ರನ್ನು ಹೊಗಳಿದರು.
ನನ್ನ ವೃತ್ತಿ ಜೀವನದ ಮೇಲೆ ಎಬಿ ಡಿವಿಲಿಯರ್ಸ್ ಗಾಢವಾದ ಪ್ರಭಾವ ಬೀರಿದ್ದಾರೆ. ನಾನು ಅವರನ್ನು ತುಂಬಾ ಹತ್ತಿರದಿಂದ ಗಮನಿಸಿದ್ದೇನೆ. ಯುಎಇಯಲ್ಲಿ ನಮ್ಮ ಆಟ ಆರಂಭವಾಗುತ್ತಿದ್ದ ವೇಳೆ ಡಿವಿಲಿಯರ್ಸ್ ಬಳಿ ಸಲಹೆ ಪಡೆಯುತ್ತಿದ್ದೆ. ಒಂದು ಓವರ್‌ಗೆ 12 ರಿಂದ 15 ರನ್ ಅಥವಾ ಕೆಲವೊಮ್ಮೆ 20 ರನ್ ಕೂಡ ಐಪಿಎಲ್ ಟೂರ್ನಿಯಲ್ಲಿ ನೀಡಿದ್ದೇನೆ. ಇದಕ್ಕೆ ಹೇಗೆ ಕಡಿವಾಣ ಹಾಕಬೇಕು ಎಂದು ಎಬಿಡಿ ಬಳಿ ಸಲಹೆ ಕೇಳಿದ್ದೆ.
ಇದಕ್ಕೆ ಅವರು, ನಿಮ್ಮ ಒಳ್ಳೆಯ ಎಸೆತಗಳಿಗೆ ಬ್ಯಾಟ್ಸ್‌ಮನ್ ಹೊಡೆದರೆ ನೀವು ಆ ಎಸೆತವನ್ನು ಬದಲಾಯಿಸಬಾರದು. ನೀವು ಒಳ್ಳೆಯ ಎಸೆತಗಳಿಗೆ ಬ್ಯಾಟ್ಸ್‌ಮನ್ ಹೊಡೆಯಲು ಪ್ರೇರೇಪಿಸಬೇಕು. ಒಂದು ವೇಳೆ ನೀವು ಬದಲಾವಣೆ ಮಾಡಿಕೊಂಡರೆ ಇದನ್ನು ಬ್ಯಾಟ್ಸ್‌ಮನ್ ಮೊದಲೇ ನಿರೀಕ್ಷಿಸುತ್ತಿರುತ್ತಾರೆ ಎಂದಿದ್ದರು. ಇದನ್ನೇ ನಾನು ಐಪಿಎಲ್‌ನಲ್ಲಿ ಅನುಸರಿಸಿದ್ದೆ. ಇದು ನನಗೆ ತುಂಬಾ ವರ್ಕ್ಔಟ್ ಆಯಿತು ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.
ಬೌಲಿಂಗ್ ವಿವಿಧ ಶೈಲಿಗಳಲ್ಲಿ ಎಸೆತಗಳನ್ನು ಹಾಕುತ್ತೇವೆ. ಇದಕ್ಕೆ ನಾನು ಒಂದು ಉದಾಹರಣೆ ನೀಡುತ್ತೇನೆ. ಸ್ಪಂಪ್‌ಗಳಿಗೆ ತೀರಾ ಹತ್ತಿರದಿಂದ ನೀವು ಬೌಲ್ ಮಾಡಿದರೆ ಅದು ನಾಲ್ಕನೇ ಸ್ಟಂಪ್ ಲೈನ್ ಆಗಿ ಕಾಣುತ್ತದೆ. ಒಂದು ವೇಳೆ ವೈಡ್ ಲೈನ್ ಮೇಲಿಂದ ನೀವು ಬೌಲ್ ಮಾಡಿದರೆ, ಬ್ಯಾಟ್ಸ್‌ಮನ್ ಆಫ್ ಸೈಡ್ ಕಡೆಗೆ ಶಾಟ್ಸ್ ಆಡುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಆ್ಯಂಗಲ್ಗಳು ಬೌಲಿಂಗ್‌ನ ದೊಡ್ಡ ಭಾಗವಾಗಿದೆ. ಇದನ್ನು ನಾನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಹರ್ಷಲ್ ಪಟೇಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನವೇ ಎಬಿ ಡಿವಿಲಿಯರ್ಸ್ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ವಿಶೇಷ.