ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ಇಂದು 74ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜುಲೈ 10, 1949ರಲ್ಲಿ ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದ ಗವಾಸ್ಕರ್, ತಮ್ಮ ಯುಗದಲ್ಲಿ ಅತ್ಯಂತ ಸೊಗಸಾದ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದರು.
ಭಾರತದ ಲಿಟಲ್ ಮಾಸ್ಟರ್ ಎಂದೇ ಕರೆಯಲ್ಪಡುವ ಗವಾಸ್ಕರ್, ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಆಗಿ ದಾಖಲೆ ಬರೆದಿದ್ದರು. ಅಲ್ಲದೇ ಟೆಸ್ಟ್ ಕ್ರಿಕೆಟ್ ತೊರೆದಾಗ ವಿಶ್ವದಲ್ಲೇ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟರ್ ಕೂಡ ಆಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 125 ಪಂದ್ಯಗಳ 214 ಇನ್ನಿಂಗ್ಸ್ಗಳನ್ನು ಆಡಿದ್ದ ಗವಾಸ್ಕರ್ 10,122 ರನ್ಗಳನ್ನು ಕಲೆ ಹಾಕಿದ್ದಾರೆ. ಮಾರ್ಚ್ 1987ರಲ್ಲಿ ಅಹಮದಾಬಾದ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 10,000 ರನ್ ಪೂರೈಸುವ ಮೂಲಕ ಈ ಮೈಲಿಗಲ್ಲು ಸಾಧಿಸಿದ್ದರು. ಟೆಸ್ಟ್ನಲ್ಲಿ 35 ಶತಕ 45 ಅರ್ಧಶತಕಗಳನ್ನು ಸುನೀಲ್ ಗವಾಸ್ಕರ್ ಹೊಂದಿದ್ದಾರೆ. 236 ಇವರ ಟೆಸ್ಟ್ವೊಂದರ ಗರಿಷ್ಠ ಸ್ಕೋರ್ ಆಗಿದೆ.
1971ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಗೆ ಪಾದಾರ್ಪಣೆ ಮಾಡಿದ ಗವಾಸ್ಕರ್ ಚೊಚ್ಚಲ ಸರಣಿಯೊಂದರಲ್ಲೇ 774 ರನ್ಗಳನ್ನು ಕಲೆಹಾಕುವ ಮೂಲಕ ವಿಶ್ವವೇ ಬೆರಗಾಗುವಂತೆ ಮಾಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧ 27 ಟೆಸ್ಟ್‌ಗಳನ್ನು ಆಡಿದ್ದು, ಅದರಲ್ಲಿ 13 ಶತಕಗಳನ್ನು ಸಿಡಿಸಿದ್ದಾರೆ. 70 ಮತ್ತು 80ರ ದಶಕದಲ್ಲಿ ವೇಗದ ಬೌಲರ್ಗಳಿಂದ ತುಂಬಿದ್ದ ವೆಸ್ಟ್ ಇಂಡೀಸ್ ಅಸಾಧಾರಣ ತಂಡವಾಗಿತ್ತು.
1971ರ ವೆಸ್ಟ್ ಇಂಡೀಸ್ ಚೊಚ್ಚಲ ಪ್ರವಾಸದಲ್ಲಿ ಗವಾಸ್ಕರ್ ಸ್ಕೋರ್:
ಮೊದಲ ಟೆಸ್ಟ್ - ಮೊದಲ ಇನ್ನಿಂಗ್ಸ್ 65 ರನ್, ಎರಡನೇ ಇನಿಂಗ್ಸ್ 67* ರನ್
ಎರಡನೇ ಟೆಸ್ಟ್ - ಮೊದಲ ಇನ್ನಿಂಗ್ಸ್ 116 ರನ್, ಎರಡನೇ ಇನ್ನಿಂಗ್ಸ್ 64* ರನ್
ಮೂರನೇ ಟೆಸ್ಟ್ - ಮೊದಲ ಇನ್ನಿಂಗ್ಸ್ 1 ರನ್, ಎರಡನೇ ಇನ್ನಿಂಗ್ಸ್ 117 ರನ್
ನಾಲ್ಕನೇ ಟೆಸ್ಟ್ - ಮೊದಲ ಇನ್ನಿಂಗ್ಸ್, 124 ರನ್ ದ್ವಿತೀಯ 220 ರನ್
ಇದೇ ಸರಣಿಯಲ್ಲಿ ಗವಾಸ್ಕರ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ ಶತಕ ಬಾರಿಸುವ ಮೂಲಕ ಈ ಸಾಧನೆ ಮಾಡಿರುವ ಏಕೈಕ ಭಾರತೀಯ ಆಟಗಾರರಾದರು. ಗವಾಸ್ಕರ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ 36 ವರ್ಷಗಳು ಕಳೆದಿದ್ದು, ಅವರ ಕೆಲವೊಂದು ದಾಖಲೆಗಳನ್ನು ಇನ್ನೂ ಮುರಿಯಲು ಯಾವೊಬ್ಬ ಬ್ಯಾಟರ್ಗೂ ಸಾಧ್ಯವಾಗಿಲ್ಲ. ODI ವೃತ್ತಿಜೀವನದಲ್ಲಿ 3,092 ರನ್ ಗಳಿಸಿರುವ ಗವಾಸ್ಕರ್ 1 ಶತಕ ಮತ್ತು 27 ಅರ್ಧಶತಕಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: CWC23 Qualifier Final: ವಿಶ್ವಕಪ್ ಅರ್ಹತಾ ಫೈನಲ್ನಲ್ಲಿ ಲಂಕಾಗೆ ಗೆಲುವು.. ಅಜೇಯರಾಗಿ ಅರ್ಹತೆ ಗಿಟ್ಟಿಸಿಕೊಂಡ ಲಂಕನ್ನರು