ಅಹಮದಾಬಾದ್: ಟೆಸ್ಟ್ ಕ್ರಿಕೆಟ್ನಲ್ಲಿ 3.5 ವರ್ಷಗಳ ನಂತರ ವಿರಾಟ್ ಕೊಹ್ಲಿ ಶತಕ ಬಾರಿಸಿ ತಮ್ಮ ಬರವನ್ನು ನೀಗಿಸಿದ್ದಾರೆ. ವಿರಾಟ್ ಬ್ಯಾಟಿಂಗ್ ಫಾರ್ಮ್ ಬಗ್ಗೆ ಬರುತ್ತಿದ್ದ ಹಲವಾರು ಪ್ರಶ್ನೆಗಳಿಗೆ ನಿನ್ನೆಯ ಪಂದ್ಯದಲ್ಲಿ ಉತ್ತರ ಸಿಕ್ಕಂತಾಗಿದೆ. ನಿನ್ನೆಯ ವಿರಾಟ್ ಬ್ಯಾಟಿಂಗ್ ಬಗ್ಗೆ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ "ಒಬ್ಬ ಒಳ್ಳೆಯ ಬ್ಯಾಟರ್ ಫಾರ್ಮ್ ಕಳೆದುಕೊಳ್ಳುವುದಿಲ್ಲ" ಎಂದು ಹೇಳಿದ್ದಾರೆ.
ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ನಲ್ಲಿ ಗಳಿಸಿದ್ದ 480 ರನ್‌ಗಳಿಗೆ ಪ್ರತಿಕ್ರಿಯೆಯಾಗಿ ಭಾರತವು 571 ರನ್ ದಾಖಲಿಸಿತು. ವಿರಾಟ್ ಕೊಹ್ಲಿ 364 ಎಸೆತಗಳಲ್ಲಿ 186 ರನ್ ಗಳಿಸಿದರು. ನವೆಂಬರ್ 2019 ರಿಂದ 41 ಇನ್ನಿಂಗ್ಸ್ಗಳ ನಂತರ ಅವರ ಬ್ಯಾಟ್ನಿಂದ ಬಂದ ಮೊದಲ ಶತಕ ಇದಾಗಿತ್ತು. ಇದು ವಿರಾಟ್ ವೃತ್ತಿ ಜೀವನದ 75ನೇ ಅಂತಾರಾಷ್ಟ್ರೀಯ ಶತಕವಾದರೆ, ಟೆಸ್ಟ್ನಲ್ಲಿ 28 ನೇಯದ್ದಾಗಿತ್ತು.
"ವಿರಾಟ್ ಕೊಹ್ಲಿ 2 ಅಥವಾ 3 ವರ್ಷಗಳಿಂದ ಶತಕ ಗಳಿಸಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಅವರು ಶತಕ ಮಾಡಿಲ್ಲ ಅಷ್ಟೇ ಅವರ ಬ್ಯಾಟ್ನಿಂದ 7 ಇಲ್ಲಾ 8 ಅರ್ಧಶತಕಗಳು ದಾಖಲಾಗಿದ್ದವು. ಅವರು ಬ್ಯಾಟಿಂಗ್ ಉತ್ತಮವಾಗಿಯೇ ಇತ್ತು. ಅವರು ವಿಕೆಟ್ ನೀಡುತ್ತಿದ್ದದ್ದು ಅವರ ತಪ್ಪಾಗಿತ್ತು. ಶತಕ ಎಂಬುದು ವಿಕೆಟ್ ಅನ್ನು ಕಾಯ್ದುಕೊಂಡಿರುವ ಕನಿಷ್ಠ ಅಂಕಿ ಅಷ್ಟೇ" ಎಂದು ಹೇಳುವ ಮೂಲಕ ಶತಕವೇ ಲಯವನ್ನು ನಿರ್ಧರಿಸುವ ಮಾನ ಅಲ್ಲ ಎಂಬ ಅಭಿಪ್ರಾಯ ತಿಳಿಸಿದ್ದಾರೆ.
ನಿನ್ನೆ ವಿರಾಟ್ ಬ್ಯಾಟ್ನಿಂದ ದಾಖಲಾದ ಶತಕ ಎರಡನೇ ನಿಧಾನ ಗತಿಯದ್ದಾಗಿದೆ. 241 ಬಾಲ್ಗಳನ್ನು ಎದುರಿಸಿ ಕೇವಲ 5 ಬೌಂಡರಿಯಿಂದ ಶತಕ ಮಾಡಿದ್ದರು. ಅಂದರೆ, ಕೇವಲ 20 ರನ್ ಫೋರ್ನಿಂದ ಬಂದಿತ್ತು, ಬಾಕಿ ರನ್ ಓಡಿ ಗಳಿಸಿಕೊಂಡಿದ್ದರು. 2012/ 13ರಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ವಿರಾಟ್ 289 ಬಾಲ್ನಿಂದ ಶತಕ ಮಾಡಿದ್ದರು. ಇದು ಅವರ ಅತಿ ಹೆಚ್ಚು ಎಸೆತ ಎದುರಿಸಿ ದಾಖಲಾದ ಮೊದಲ ಶತಕವಾಗಿದೆ.
"ಟೆಸ್ಟ್ ಪಂದ್ಯದ ಶತಕವನ್ನು ಹೇಗೆ ಗಳಿಸಬೇಕು ಎಂಬುದನ್ನು ಕೊಹ್ಲಿಯ ನಿನ್ನೆಯ ಆಟ ಸಾಕ್ಷಿಯಾಗಿತ್ತು. ವಿರಾಟ್ ಸ್ವಲ್ಪ ನಿಧಾನವಾಗಿ ಪ್ರಾರಂಭಿಸಿದರು ಅಲ್ಲಿ ಪಿಚ್ ಮತ್ತು ಬೌಲಿಂಗ್ ಅನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಸೆಟ್ ಆದ ನಂತರ ವಿರಾಟ್ ಕೆಲವು ಉತ್ತಮ ಹೊಡೆತಗಳನ್ನ ಬಾರಿಸಿದರು. ಶತಕದ ನಂತರ ಧೃಡವಾಗಿ ಬ್ಯಾಟ್ ಬೀಸಿದರು. ಇದು ವಿರಾಟ್ ಬ್ಯಾಟಿಂಗ್ನಲ್ಲಿ ಸ್ಕೋರ್ ಮಾಡುವ ದೃಢಸಂಕಲ್ಪ ಹೊಂದಿದ್ದರು ಎಂಬುದನ್ನು ತೋರಿಸುತ್ತದೆ" ಎಂದು ಗವಾಸ್ಕರ್ ಹೇಳಿದರು.
"ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಬೃಹತ್ ರನ್ಗಳ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್ ವಿರಾಟ್ ಲೆಕ್ಕಾಚಾರದಲ್ಲಿತ್ತು. ಉಸ್ಮಾನ್ ಖವಾಜಾ ಅವರ 180 ಹಾಗೇ ಕ್ಯಾಮರೂನ್ ಗ್ರೀನ್ ಶತಕ ಆಸಿಸ್ಗೆ ಹೇಗೆ ನೆರವಾಗಿದೆ ಎಂಬುದನ್ನು ಅವರು ಚನ್ನಾಗಿಯೇ ಅರಿತಿದ್ದರು. ಶುಭಮನ್ ಗಿಲ್ 128 ರನ್ ಮಾಡಿರುವ ಲೆಕ್ಕಾಚಾರದಲ್ಲೇ ವಿರಾಟ್ 480 ತಲುಪಲು ಬೇಕಾದ ರನ್ ಗಳಿಸಲು ಧೃಡವಾಗಿ ನಿಂತಿದ್ದರು ಎಂದು ಗವಾಸ್ಕರ್ ಅವರು ವಿರಾಟ್ ಬ್ಯಾಟಿಂಗ್ ಲೆಕ್ಕಾಚಾರದ ಬಗ್ಗೆ ಮಾತನಾಡಿದರು.
ಇದನ್ನೂ ಓದಿ: ವಿಶ್ವಕಪ್ ಪಂದ್ಯಗಳನ್ನು 40 ಓವರ್ಗೆ ಇಳಿಸಿ, ಇಲ್ಲವಾದಲ್ಲಿ ಏಕದಿನ ಕ್ರಿಕೆಟ್ ಅಳಿಯಲಿದೆ: ರವಿಶಾಸ್ತ್ರಿ