ಗ್ಕೆಬರ್ಹಾ(ದಕ್ಷಿಣ ಆಫ್ರಿಕಾ): ಇಲ್ಲಿನ ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ ನಡೆದ ಟಿ20 ಎಡರನೇ ಪಂದ್ಯದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಐದು ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ರಿಂಕು ಸಿಂಗ್ ಮತ್ತೊಮ್ಮೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ಸಹ ಪ್ರಯೋಜನವಾಗಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಬೌಲರ್‌ಗಳು ವಿಫಲರಾದರು.
ಪಂದ್ಯಕ್ಕೆ ಮಳೆ ಅಡ್ಡಿ: ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಡಕ್‌ವರ್ತ್ ಲೂಯಿಸ್ ನಿಯಮದಡಿ 5 ವಿಕೆಟ್‌ಗಳ ಸೋಲು ಕಂಡಿದೆ. ರಿಂಕು ಸಿಂಗ್ (68; 39 ಎಸೆತಗಳಲ್ಲಿ 9×4, 2×6) ಮತ್ತು ಸೂರ್ಯಕುಮಾರ್ ಯಾದವ್ (56; 36 ಎಸೆತಗಳಲ್ಲಿ 5×4, 3×6) ಮಿಂಚಿದ್ದರಿಂದ ಭಾರತ 7 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತ್ತು. ಮಳೆಯಿಂದಾಗಿ ಟೀಂ ಇಂಡಿಯಾ ಇನಿಂಗ್ಸ್ 19.3 ಓವರ್‌ಗಳಲ್ಲಿ ಕೊನೆಗೊಂಡಿತು.
ಸೂರ್ಯ, ರಿಂಕು ಭರ್ಜರಿ ಬ್ಯಾಟಿಂಗ್: ಭಾರತದ ಇನ್ನಿಂಗ್ಸ್ ವೇಳೆ ನಾಯಕ ಸೂರ್ಯಕುಮಾರ್ ಮತ್ತು ರಿಂಕು ಸಿಂಗ್ ಹೈಲೈಟ್ ಆಗಿದ್ದರು. ಟೀಂ ಇಂಡಿಯಾ ಬೃಹತ್ ರನ್ ಗಳಿಸಲು ಇವರಿಬ್ಬರೇ ಕಾರಣ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಶೂನ್ಯಕ್ಕೆ ಆರಂಭಿಕ ಆಟಗಾರರಿಬ್ಬರು ವಿಕೆಟ್ ಒಪ್ಪಿಸಿದ ನಂತರ ರಿಂಕು ಸಿಂಗ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ಅಬ್ಬರ ಇನ್ನಿಂಗ್ಸ್ ಬಲದಿಂದ ಟೀಮ್ ಇಂಡಿಯಾ ಮಳೆ ಆರಂಭಕ್ಕೂ ಮುನ್ನ 19.3 ಓವರ್ಗೆ 7 ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಿತ್ತು. ಟಾಸ್ಗೂ ಮುನ್ನ ಮಳೆಯ ಮುನ್ಸೂಚನೆ ಇತ್ತಾದರೂ ನಂತರ ವರುಣ ಆಟಕ್ಕೆ ಅವಕಾಶ ಮಾಡಿಕೊಟ್ಟದ್ದ. ಆದರೆ, 19.3ನೇ ಓವರ್ ವೇಳೆಗೆ ದಿಢೀರನೇ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಗಿತ್ತು.
ಭಾರತದ ಪರ ಯಶಸ್ವಿ ಜೈಸ್ವಾಲ್ 0 ರನ್, ಶುಭಮನ್ ಗಿಲ್ 0 ರನ್, ತಿಲಕ್ ವರ್ಮಾ 29 ರನ್, ಸೂರ್ಯಕುಮಾರ್ ಯಾದವ್ 56 ರನ್, ಜಿತೇಶ್ ಶರ್ಮಾ 1 ರನ್, ರವೀಂದ್ರ ಜಡೇಜಾ 19 ರನ್, ಅರ್ಷ್ ದೀಪ್ ಸಿಂಗ್ 0 ರನ್, ಔಟಾಗದೇ ರಿಂಕು ಸಿಂಗ್ 68 ರನ್ ಮತ್ತು ಮೊಹಮ್ಮದ್ ಸಿರಾಜ್ 0 ರನ್ ಗಳಿಸಿದರು. ಇನ್ನು ದಕ್ಷಿಣಾ ಆಫ್ರಿಕಾ ವಿರುದ್ಧ ಜೆರಾಲ್ಡ್ ಕೋಟ್ಜಿ ಮೂರು ವಿಕೆಟ್ ಪಡೆದು ಮಿಂಚಿದ್ರೆ, ಐಡೆನ್ ಮಾರ್ಕ್ರಾಮ್, ತಬ್ರೈಜ್ ಶಮ್ಸಿ, ಮಾರ್ಕೊ ಜಾನ್ಸೆನ್ ಮತ್ತು ಲಿಜಾಡ್ ವಿಲಿಯಮ್ಸ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.
ಇನ್ನು ಡಕ್‌ವರ್ತ್ ಲೂಯಿಸ್ ನಿಯಮದಡಿ 15 ಓವರ್‌ಗಳಲ್ಲಿ 152 ರನ್‌ಗಳ ಗುರಿಯನ್ನು ಸೌತ್ ಆಫ್ರಿಕಾ ಹೊಂದಿತ್ತು. ಭಾರತ ತಂಡ ನೀಡಿದ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಆರಂಭದಿಂದಲೇ ಅಬ್ಬರಿಸಿತು. ಟೀಂ ಇಂಡಿಯಾ ಬೌಲಿಂಗ್ನಲ್ಲೂ ಸಹ ಆರಂಭದಲ್ಲೇ ಎಡವಿತ್ತು. ಮೊದಲ ಎರಡು ಓವರ್‌ಗಳಲ್ಲಿ 38 ರನ್ ಗಳಿಸಿದ ಹೆಂಡ್ರಿಕ್ಸ್ ಮತ್ತು ಬ್ರೀಜ್ಕೆ (16) ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಆರಂಭ ನೀಡಿದರು. ಅರ್ಷದೀಪ್ ಎರಡನೇ ಓವರ್‌ನಲ್ಲಿ ಕಳಪೆ ಬೌಲಿಂಗ್‌ನಿಂದ 24 ರನ್ ನೀಡಿದರು. ಮೂರನೇ ಓವರ್‌ನಲ್ಲಿ ಜಡೇಜಾ ಬ್ರೀಜ್‌ಕೆಯನ್ನು ಔಟ್ ಮಾಡಿದರು. ಆದ್ರೆ ದಕ್ಷಿಣ ಆಫ್ರಿಕಾದ ಆಕ್ರಮಣಕಾರಿ ಆಟದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಹೆಂಡ್ರಿಕ್ಸ್ ಜೊತೆಗೆ ಮಾರ್ಕ್ರಾಮ್ ಕೂಡ ಆಕ್ರಮಣಕಾರಿ ಆಟವಾಡಿದ್ದರಿಂದ ಸ್ಕೋರ್ ಬೋರ್ಡ್ ರನ್ಗಳಿಂದ ಓಡುತ್ತಲೇ ಇತ್ತು. ಮುಖೇಶ್ ಮತ್ತು ಕುಲದೀಪ್ ಕೂಡ ಬ್ಯಾಟರ್‌ಗಳ ಅಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬಳಿಕ ಮೇಲಿಂದ ಮೇಲೆ ಭಾರತ ಮೂರು ವಿಕೆಟ್ ಪಡೆಯುವ ಮೂಲಕ ಮತ್ತೆ ಫಾರ್ಮ್ನಲ್ಲಿ ಬಂತು. ನಂತರ ಪಂದ್ಯ ಕೊಂಚ ಕುತೂಹಲ ಮೂಡಿಸಿತು.
ಕೊನೆಯ ಐದು ಓವರ್‌ಗಳಲ್ಲಿ ಗೆಲುವಿಗೆ 36 ರನ್‌ಗಳ ಅಗತ್ಯವಿತ್ತು. ಆ ಹಂತದಲ್ಲಿ ಮಿಲ್ಲರ್ ಮತ್ತು ಸ್ಟಬ್ಸ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡವನ್ನು ಗುರಿಯತ್ತ ಮುನ್ನಡೆಸುತ್ತಿದ್ದರು. 14 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿದ್ದ ಹಂತದಲ್ಲಿ ಮಿಲ್ಲರ್ ಔಟಾದರು. ಬಳಿಕ ಫೆಲುಕ್ವಾಯೊ ಮತ್ತು ಸ್ಟಬ್ಸ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ದಕ್ಷಿಣ ಆಫ್ರಿಕಾ ಪರ ಮ್ಯಾಥ್ಯೂ ಬ್ರೀಟ್ಜ್ಕೆ 16 ರನ್, ರೀಜಾ ಹೆಂಡ್ರಿಕ್ಸ್ 49 ರನ್, ಐಡೆನ್ ಮಾರ್ಕ್ರಾಮ್ 30 ರನ್, ಹೆನ್ರಿಚ್ ಕ್ಲಾಸೆನ್ 7 ರನ್, ಡೇವಿಡ್ ಮಿಲ್ಲರ್ 17 ರನ್, ಔಟಾಗದೇ ಟ್ರಿಸ್ಟಾನ್ ಸ್ಟಬ್ಸ್ 14 ರನ್ ಮತ್ತು ಆಂಡಿಲ್ ಫೆಹ್ಲುಕ್ವಾಯೊ 10 ರನ್ ಗಳಿಸಿ ಮಿಂಚಿದರು. ಭಾರತ ತಂಡದ ಪರ ಮುಖೇಶ್ ಕುಮಾರ್ 2 ವಿಕೆಟ್‌ಗಳ ಪಡೆದ್ರೆ, ಸಿರಾಜ್ ಮತ್ತು ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಓದಿ: U-19 ಏಷ್ಯಾ ಕಪ್: 7 ವಿಕೆಟ್ ಪಡೆದು ಮಿಂಚಿದ ರಾಜ್ ಲಿಂಬಾನಿ, ನೇಪಾಳ ವಿರುದ್ಧ ಗೆದ್ದ ಭಾರತ ಸೆಮೀಸ್ಗೆ