ಮುಂಬೈ : ಭಾರತ ಕ್ರಿಕೆಟ್ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ನಾಯಕ ಸೌರವ್ ಗಂಗೂಲಿ ತಮ್ಮ ಜೀವನ ಚರಿತ್ರೆಯನ್ನು ಸಿನಿಮಾ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಬಾಲಿವುಡ್ನ ಖ್ಯಾತ ನಟ ರಣಬೀರ್ ಕಪೂರ್ ದಾದಾ ಪಾತ್ರದಲ್ಲಿ ನಟಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ತಮ್ಮ ಜೀವನಚರಿತ್ರೆಯನ್ನು ಸಿನಿಮಾ ಮಾಡಲು ಗಂಗೂಲಿ ದೊಡ್ಡ ಪ್ರೊಡಕ್ಷನ್ ಸಂಸ್ಥೆಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸುಮಾರು 200ರಿಂದ 250 ಕೋಟಿ ರೂ. ಬಜೆಟ್ ಸಿನಿಮಾವಾಗಲಿದೆ ಎಂದು ತಿಳಿದು ಬಂದಿದೆ.
ನಾನು ಬಯೋಪಿಕ್ಗೆ ಒಪ್ಪಿಗೆ ಸೂಚಿಸಿದ್ದೇನೆ. ಇದು ಹಿಂದಿಯಲ್ಲಿ ಆಗಲಿದೆ. ಆದರೆ, ಈಗಲೇ ನಿರ್ದೇಶಕ ಯಾರೆಂದು ಹೇಳಲು ಸಾಧ್ಯವಿಲ್ಲ. ಎಲ್ಲವನ್ನೂ ವ್ಯವಸ್ಥೆಗೊಳಿಸಲು ಇನ್ನೂ ಕೆಲವು ದಿನಗಳು ತೆಗೆದುಕೊಳ್ಳುತ್ತದೆ ಎಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ದಾದಾ ಹೇಳಿದ್ದಾರೆ.
ಪ್ರೊಡಕ್ಷನ್ ಹೌಸ್‌ವೊಂದು ಭಾರತ ತಂಡದ ಮಾಜಿ ನಾಯಕನ ಜೊತೆ ಸಾಕಷ್ಟು ಸಭೆ ನಡೆಸಿ ಸ್ಕ್ರಿಪ್ಟ್ ಕುರಿತು ಚರ್ಚಿಸಿದೆ. ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ ಈ ಸಿನಿಮಾಗೆ ಮೊದಲ ಆಯ್ಕೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ. ಆದರೆ, ಇದರ ಬಗ್ಗೆ ಇನ್ನೂ ಖಚಿತ ಮಾಹಿತಿ ತಿಳಿದು ಬಂದಿಲ್ಲ.
ಈಗಾಗಲೇ ಎಂಎಸ್ ಧೋನಿ, ಮೊಹಮದ್ ಅಜರುದ್ದೀನ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಬಯೋಪಿಕ್ಗಳು ಬಾಲಿವುಡ್ನಲ್ಲಿ ಮೂಡಿ ಬಂದಿವೆ. ದಿವಂಗತ ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದ ಎಂಎಸ್ ಧೋನಿ ದಿ ಅನ್ಟೋಲ್ಡ್ ಸ್ಟೋರಿ ಸಿನಿಮಾ ಕಮರ್ಷಿಯಲ್ ಆಗಿಯೂ ಯಶಸ್ವಿಯಾಗಿದೆ. ಸುಮಾರು 200 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು. ಇದೀಗ ಗಂಗೂಲಿ ಅವರ 50ನೇ ಜನ್ಮದಿನದಂದು ಈ ಸಿನಿಮಾ ತೆರೆ ಕಾಣುವ ಸಾಧ್ಯತೆಯಿದೆ.
ಇದನ್ನು ಓದಿ: ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಗಂಗೂಲಿ... ಯಾವ ಕಾರಣಕ್ಕಾಗಿ?