ಭಾರತದ ಸ್ಟಾರ್ ಬ್ಯಾಟರ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಾಯಕ ಶ್ರೇಯಸ್ ಅಯ್ಯರ್ ಬೆನ್ನಿನ ಶಸ್ತ್ರಚಿಕಿತ್ಸೆಯಿಂದಾಗಿ ಮುಂದಿನ ನಾಲ್ಕರಿಂದ ಐದು ತಿಂಗಳ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಬೆನ್ನಿನ ಕೆಳಭಾಗದ ಸಮಸ್ಯೆಯಿಂದಾಗಿ ಅಯ್ಯರ್ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಏಕದಿನ ಸರಣಿಯಿಂದ ಹೊರಗುಳಿಯಬೇಕಾಯಿತು.
ಅಯ್ಯರ್ ಅವರಿಗೆ ಶಸ್ತ್ರಚಿಕಿತ್ಸೆಗೆ ಹೋಗಲು ಸಲಹೆ ನೀಡಲಾಗಿದೆ. ಅವರು ಲಂಡನ್‌ನಲ್ಲಿ ತಜ್ಞ ವೈದ್ಯರ ಬಳಿಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಭರತದಲ್ಲೇ ಚಿಕಿತ್ಸೆ ದೊರೆತರೆ ಇಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ ಮೂಲಗಳು ತಿಳಿಸಿವೆ. ಆದ್ದರಿಂದ ಅಯ್ಯರ್ ಅವರು ಜೂನ್‌ನಲ್ಲಿ ಓವಲ್‌ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಮುಂಬರುವ ಐಪಿಎಲ್ ಸೀಸನ್ 16 ಎರಡರಿಂದಲೂ ದೂರ ಉಳಿಯುವ ಸಾಧ್ಯತೆ ಇದೆ. ಇದರಿಂದ ಕೊಲ್ಕತ್ತಾ ನೈಟ್ ರೈಡರ್ಸ್ಗೆ ದೊಡ್ಡ ಪೆಟ್ಟಾಗಲಿದೆ.
ಏಕದಿನ ವಿಶ್ವಕಪ್ ಗುರಿ: ಆದರೆ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಮತ್ತು ಏಕದಿನ ಮಾದರಿಯಲ್ಲಿ ನಡೆಯಲಿರುವ ಏಷ್ಯಾಕಪ್ನಲ್ಲಿ ಚೇತರಿಸಿಕೊಂಡು ಆಡುವ ನಿರೀಕ್ಷೆ ಇದೆ. ಭಾರತ ಮಧ್ಯಮ ಕ್ರಮಾಂಕದಲ್ಲಿ ಸದ್ಯ ಸೂರ್ಯಕುಮಾರ್ ಯಾದವ್ರನ್ನು ಆಡಿಸಲಾಗುತ್ತಿದೆ. ಅವರ ಬದಲಿ ಆಟಗಾರರನ್ನು ಈ ಏಕದಿನ ಸರಣಿಯಲ್ಲಿ ಆಯ್ಕೆ ಮಾಡಿಲ್ಲ. ಎರಡು ಪಂದ್ಯದಲ್ಲಿ ಸೂರ್ಯ ಶೂನ್ಯ ಸುತ್ತಿದರೂ ಪರ್ಯಾಯ ಇಲ್ಲದೇ ಅವರನ್ನೇ ಆಡಿಸಲಾಗುತ್ತಿದೆ. ಸಂಜು ಸ್ಯಾಮ್ಸನ್ಗೂ ಅವಕಾಶ ಮಾಡಿಕೊಟ್ಟಿಲ್ಲ. ಕೆಕೆಆರ್ಗೆ ನಾಯಕತ್ವದ ಕೊರತೆಯೂ ಅಯ್ಯರ್ ನಿರ್ಗಮನದಿಂದ ಕಾಡಲಿದೆ. ಸಂಪೂರ್ಣ ಸರಣಿಯಿಂದ ಹೊರಗುಳಿಯುತ್ತಾರೆ ಎಂದಾದರೆ ಬೇರೆ ನಾಯಕತ್ವವನ್ನು ಹುಡುಕ ಬೇಕಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಶ್ರೇಯಸ್ ಅಯ್ಯರ್ ಔಟ್: ಐಪಿಎಲ್ನಿಂದಲೂ ಹೊರಗುಳಿಯುವ ಸಾಧ್ಯತೆ
ನಾಲ್ಕನೇ ಟೆಸ್ಟ್ನಲ್ಲಿ ಅಯ್ಯರ್ಗೆ ಗಾಯ: ಅಹಮದಾಬಾದ್‌ನಲ್ಲಿ ನಡೆದ ಇತ್ತೀಚಿನ ಬಾರ್ಡರ್ ಗವಾಸ್ಕರ್ ಟ್ರೋಫಿ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಅವರು ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ಗೆ ಇಳಿಯಲೇ ಇಲ್ಲ. ಅವರನ್ನು ಸ್ಕ್ಯಾನಿಂಗ್ಗೆ ಕಳಿಸಲಾಗಿದೆ ಎಂದು ಬಿಸಿಸಿಐ ತಿಳಿಸಿತ್ತು. ಅದರಂತೆ ಅವರು ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿಲ್ಲ. ಏಕದಿನ ಸರಣಿಯ ತಂಡಕ್ಕೆ ಅಯ್ಯರ್ಗೆ ಗಾಯದ ಸಮಸ್ಯೆ ಇದ್ದರೂ ಬೇರೆ ಪರ್ಯಾಯ ಆಟಗಾರರನ್ನು ತಂಡಕ್ಕೆ ಬಿಸಿಸಿಐ ಪ್ರಕಟಿಸಿರಲಿಲ್ಲ.
ಎರಡನೇ ಟೆಸ್ಟ್ ವೇಳೆ ತಂಡಕ್ಕೆ ಮರಳಿದ್ದ ಅಯ್ಯರ್: ಅಯ್ಯರ್ಗೆ ಬೆನ್ನು ನೋವಿನ ಸಮಸ್ಯೆ ಇದ್ದ ಕಾರಣ ಚಿಕಿತ್ಸೆಯಲ್ಲಿದ್ದರು. ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್ ವೇಳೆ ಚೇತರಿಸಿಕೊಂಡು ತಂಡಕ್ಕೆ ಸೇರಿದ್ದರು. ಮೊದಲ ಟೆಸ್ಟ್ನಲ್ಲಿ ಅಯ್ಯರ್ ಜಾಗದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಪದಾರ್ಪಣೇ ಮಾಡಲಾಗಿತ್ತು. ಅವರು 8 ರನ್ಗೆ ಔಟ್ ಆಗಿದ್ದರು. ಹೀಗಾಗಿ ಮುಂದಿನ ಪಂದ್ಯದಲ್ಲಿ ಅಯ್ಯರ್ಗೆ ಸ್ಥಾನ ನೀಡಲಾಗಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮುಂಬೈ ಮೂಲದ ಬೆನ್ನುಮೂಳೆಯ ತಜ್ಞ ಡಾ. ಅಭಯ್ ನೆನೆ ಅವರಿಂದ ಸಲಹೆ ಪಡೆಯುತ್ತಿದ್ದಾರೆ. ಜೊತೆಗೆ ಬಾಂಬೆ ಮತ್ತು ಲೀಲಾವತಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಇಂಡಿಯಾ- ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ: ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ ಭರ್ಜರಿ ಅಭ್ಯಾಸ