ಚೆನ್ನೈ: ಮೊಣಕಾಲು ಗಾಯದಿಂದ ರವೀಂದ್ರ ಜಡೇಜಾ ಮತ್ತು ಬೆನ್ನು ಮೂಳೆಯ ಸಮಸ್ಯೆಯಿಂದ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್ ತಂಡದಿಂದ ಹೊರಗುಳಿದ್ದಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಈ ಇಬ್ಬರ ಅನುಪಸ್ಥಿತಿಯಿಂದ ಹೊಸಬರಿಗೆ ಅವಕಾಶ ದೊರೆಯಲು ಮತ್ತು ತಂಡವನ್ನು ಪರೀಕ್ಷೆಗೆ ಒಡ್ಡಲು ಉತ್ತಮ ಅವಕಾಶ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದ ಎದುರಿನ ಪಂದ್ಯದ ನಂತರ ಬುಮ್ರಾ ಬೆನ್ನು ಮೂಳೆಯ ನೋವಿನಿಂದಾಗಿ ಟಿ20 ವಿಶ್ವಕಪ್‌ನಿಂದ ಹೊರಗುಳಿದರು. ಏಷ್ಯಾ ಕಪ್ ಟೂರ್ನಿ ಮಧ್ಯೆಯಲ್ಲೇ ಮೊಣಕಾಲು ಗಾಯದಿಂದ ಜಡೇಜಾ ಸಹ ಹೊರಗುಳಿದಿದ್ದರು. ಇಬ್ಬರೂ ಆಟಗಾರರು ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದ ಪ್ರಮುಖ ಆಟಗಾರರಾಗಿದ್ದರು. ಬೌಲಿಂಗ್ ಸಮಸ್ಯೆ ಎದುರಿಸುತ್ತಿರುವ ಭಾರತಕ್ಕೆ ಇಬ್ಬರು ಸ್ಟಾರ್ ಆಟಗಾರರ ಅನುಪಸ್ಥಿತಿ ಕಾಡುತ್ತಿದೆ. ಸ್ವಿನ್ ಮತ್ತು ಆಲ್ರೌಂಡ್ ವಿಭಾಗದಲ್ಲಿ ಜಡೇಜಾ ಮುಖ್ಯ ಪಾತ್ರ ವಹಿಸಿದರೆ, ಬುಮ್ರಾ ಅಂತಿಮ ಓವರ್ಗಳನ್ನು ನಿಂಯಂತ್ರಣ ಸಾಧಿಸಲು ಮತ್ತು ಯಾರ್ಕರ್ ಸ್ಪೆಷಲಿಸ್ಟ್ ಆಗಿ ತಂಡಕ್ಕೆ ನೆರವಾಗುತ್ತಿದ್ದರು.
ಬುಮ್ರಾ ಬದಲಿ ಆಟಗಾರರ ಬಗ್ಗೆ ಇನ್ನೂ ಬಿಸಿಸಿಐ ಯಾರನ್ನೂ ಆಯ್ಕೆ ಮಾಡಿಲ್ಲ, ಈ ನಡುವೆ ಕೋಚ್ ರಾಹುಲ್ ದ್ರಾವಿಡ್, ಮಹಮ್ಮದ್ ಶಮಿ ಕೊವಿಡ್ನಿಂದ ಚೇತರಿಸಿಕೊಂಡು ಟೀಮ್ ಸೇರುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಮಹಮ್ಮದ್ ಶಮಿ ವಿಶ್ವಕಪ್ ಟೂರ್ನಿಯ ಮೀಸಲು ಆಟಗಾರರ ಪಟ್ಟಿಯಲ್ಲಿದ್ದ ಕಾರಣ ಅವರಿಗೆ ಮೊದಲ ಪ್ರಾಶಸ್ತ್ಯ ಇರಲಿದೆ. ಇಲ್ಲದಿದ್ದಲ್ಲಿ ದಕ್ಷಿಣ ಆಫ್ರಿಕಾ ಎದುರು ಉತ್ತಮ ಬೌಲಿಂಗ್ ಮಾಡಿದವರ ಆಯ್ಕೆಯೂ ಸಾಧ್ಯತೆ ಇದೆ. ಹರಿಣಗಳ ಎದುರಿನ ಟಿ20 ಪಂದ್ಯಗಳಿಗೆ ಬುಮ್ರಾ ಬದಲಿಯಾಗಿ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರನ್ನೇ ವಿಶ್ವಕಪ್ಗೂ ಆಡಿಸುವ ಸಾಧ್ಯತೆಯೂ ಇದೆ.
ಈ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ವಿಶ್ವಕಪ್‌ಗೆ ಬುಮ್ರಾ ಇರದಿರುವುದು ಮತ್ತು ಜಡೇಜಾ ಅನುಪಸ್ಥಿತಿ ತಂಡವನ್ನು ಕಾಡುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಇನ್ನೊಬ್ಬ ಚಾಂಪಿಯನ್ ಪ್ಲೇಯರನ್ನು ಹುಡುಕಲು ಸಹ ಸಾಧ್ಯವಾಗುತ್ತದೆ. ಟಿ20 ವಿಶ್ವಕಪ್‌ಗೆ ಸ್ಟ್ಯಾಂಡ್‌ಬೈ ಆಗಿರುವ ಶಮಿಯೂ ಸೂಕ್ತ ಆಟಗಾರ. ಅವರಿಗೆ ಆಸ್ಟ್ರೇಲಿಯಾದ ಪಿಚ್ಗಳಲ್ಲಿ ಆಡಿದ ಅನುಭವ ಇದೆ. ಕೆಲವು ಆಟಗಾರರು ಗಾಯಗೊಂಡರೂ ಭಾರತದ ತಂಡ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :ರಾಂಚಿಗೆ ಬಂದಿಳಿದ ಶಿಖರ್, ಬವುಮಾ ಪಡೆ : ರಾಚಿಯಲ್ಲಿ ಎರಡನೇ ಏಕದಿನ ಪಂದ್ಯ