ದುಬೈ: ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ನೀಡಿದ ಕಳಪೆ ಪ್ರದರ್ಶನ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯೂಸ್ ಟುಡೇಯೊಂದಿಗೆ ಮಾತನಾಡಿದ ಅವರು, ಹಿರಿಯ ಆಟಗಾರರ ಕಳಪೆ ಪ್ರದರ್ಶನದಿಂದ ತಂಡದ ಸಾಮರ್ಥ್ಯ ಕುಸಿದಿದೆ. ಈ ಬಗ್ಗೆ ಬಿಸಿಸಿಐ ಮುತುವರ್ಜಿ ವಹಿಸಿಬೇಕು. ಜೊತೆಗೆ ಪ್ರಶ್ನೆ ಮಾಡುವುದನ್ನು ಕಲಿಯಬೇಕು. ಅರ್ಹತಾ ಸುತ್ತಿನಲ್ಲೇ ಇಷ್ಟೊಂದು ಹೀನಾಯವಾದರೆ ಮುಂದಿನ ದಿನಮಾನದಲ್ಲಿ ಊಹಿಸಲು ಸಾಧ್ಯವಾಗುತ್ತಿಲ್ಲ. ಆಯ್ಕೆಗಾರರು ಈ ಬಗ್ಗೆ ಗಂಭೀರವಾಗಿ ಯೋಚಿಸುವ ಕಾಲವಿದು ಎಂದರು.
ಕೆಲ ಆಟಗಾರರ ಬದಲಾವಣೆ ಮಾಡುವ ಬಗ್ಗೆಯೂ ಪ್ರಸ್ತಾಪ ಮಾಡಿದ ಅವರು, ಐಪಿಎಲ್‌ನಲ್ಲಿ ಮಿಂಚುತ್ತಿರುವ ಯುವ ಆಟಗಾರರಿಗೆ ಅವಕಾಶ ಮಾಡಿಕೊಡುವ ಯೋಚನೆ ಮಾಡಬೇಕು. ಇದರಿಂದ ಭವಿಷ್ಯದ ಟೀಂ ಇಂಡಿಯಾಗೆ ಕ್ಲಾರಿಟಿ ಬರಲಿದೆ. ಯುವ ಆಟಗಾರರು ಆರಂಭದಲ್ಲಿ ವಿಫಲರಾದರೂ ಪರವಾಗಿಲ್ಲ. ಅವರಿಗೆ ಅನುಭವವಾಗುತ್ತದೆ.
ಕೆಟ್ಟ ಪ್ರದರ್ಶನ ನೀಡುತ್ತಿರುವ ಸ್ಟಾರ್ ಆಟಗಾರರ ಬದಲು ಇವರನ್ನು ಕಣಕ್ಕಿಳಿಸಿ ನೋಡಿ. ಅನುಭವಿ ಆಟಗಾರರು ಕಳಪೆ ಪ್ರದರ್ಶನ ನೀಡಿದರೆ ಇದರಿಂದ ತಂಡಕ್ಕೆ ದೊಡ್ಡ ಅವಮಾನ. ಇದನ್ನು ಅರಿತು ಬಿಸಿಸಿಐ ತಕ್ಷಣ ಮಧ್ಯಪ್ರವೇಶ ಮಾಡಿ ತಂಡ ಅನುಭವಿಸುತ್ತಿರುವ ಅವಮಾನ ತಡೆಯಬೇಕು ಎಂದಿದ್ದಾರೆ.
ಸೆಮಿಫೈನಲ್ ಅರ್ಹತೆ ಹೀಗರಬೇಕು:
ಇತರ ತಂಡಗಳ ಪ್ರದರ್ಶನದ ಆಧಾರದ ಮೇಲೆ ಟೀಂ ಇಂಡಿಯಾದ ಪ್ರಗತಿಯನ್ನು ಭಾರತೀಯ ಕ್ರಿಕೆಟ್ ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ನೀವು ವಿಶ್ವಕಪ್ ಗೆಲ್ಲಬೇಕೆಂದರೆ ಅಥವಾ ಸೆಮಿಫೈನಲ್ ಪ್ರವೇಶಿಸಬೇಕೆಂದರೆ ನಿಮ್ಮ ಸ್ವಂತ ಆಟದಿಂದ ಸಾಧಿಸಿ. ಇತರರ ಮೇಲೆ ಅವಲಂಬಿತವಾಗುವುದು ಒಳ್ಳೆಯದಲ್ಲ. ಆಯ್ಕೆದಾರರು ಭವಿಷ್ಯದ ಬಗ್ಗೆ ನಿರ್ಧರಿಸುವ ಸಮಯ ಬಂದಿದೆ ಎಂದಿದ್ದಾರೆ.