ಧರ್ಮಶಾಲ(ಹಿಮಾಚಲ ಪ್ರದೇಶ): ಧರ್ಮಶಾಲದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ ಪಡೆ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ 3 ಪಂದ್ಯಗಳ ಟಿ-20 ಟೂರ್ನಿಯಲ್ಲಿ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಶ್ರೀಲಂಕಾ ನೀಡಿದ 183 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಹಾಗೂ ರವೀಂದ್ರ ಜಡೇಜಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿಂದ 17.1 ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಆರಂಭಿಕ ಬ್ಯಾಟರ್‌ಗಳಾದ ನಾಯಕ ರೋಹಿತ್ ಶರ್ಮಾ ಹಾಗೂ ಈಶನ್ ಕಿಶನ್ ಬೇಗ ಔಟಾದರು. ಬಳಿಕ ಬಂದ ಶ್ರೇಯಸ್ ಬೀರುಸಿನ ಬ್ಯಾಟಿಂಗ್ ಮಾಡಿದರು. 44 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸಹಿತ 74 ರನ್ ಚಚ್ಚಿದರು.
ಕೇರಳಿಗ ಸಂಜು ಸ್ಯಾಮ್ಸನ್ ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ಮೊರೆ ಹೋದರೂ 13ನೇ ಓವರ್‌ನಲ್ಲಿ 3 ಸ್ಫೋಟಕ ಸಿಕ್ಸರ್ ಸಿಡಿಸಿದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಲಹೀರು ಕುಮಾರ ಎಸೆತದಲ್ಲಿ ಔಟಾದರು. ಸಂಜು ಸ್ಯಾಮ್ಸನ್ ಔಟಾದ ಬಳಿಕ ಕ್ರೀಸ್‌ಗೆ ಬಂದ ಜಡೇಜ ಕೇವಲ 18 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ಸೇರಿ 45 ರನ್‌ಗಳಿಸುವ ಮೂಲಕ ಟೀಂ ಇಂಡಿಯಾ ಗೆಲುವನ್ನು ಸುಲಭಗೊಳಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದ ರೋಹಿತ್ ಪಡೆ ಲಂಕಾವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭದಲ್ಲಿ ನಿಧಾನವಾಗಿ ಬ್ಯಾಟ್ ಬೀಸಿದ ಶನಕ ನೇತೃತ್ವದ ಶ್ರೀಲಂಕಾ ಪಡೆ ನಂತರ ಬಿರುಸಿನ ಆಟದ ಮೂಲಕ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಆರಂಭಿಕ ಬ್ಯಾಟರ್ ಪಾತುಂ ನಿಸ್ಸಾಂಕ ಸ್ಫೋಟದ ಆಟದ ಮೂಲಕ ಟೀಂ ಇಂಡಿಯಾದ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದರು. 53 ಎಸೆತಗಳನ್ನು ಎದುರಿಸಿದ ಪಾತುಂ 11 ಬೌಂಡರಿ ಸಹಿತ 75 ರನ್‌ಗಳನ್ನು ಸಿಡಿಸಿದರು. ಗುಣತಿಲಕ 29 ಎಸೆತಗಳಿಂದ 2 ಸಿಕ್ಸರ್, 4 ಬೌಂಡರಿ ಸೇರಿ 38 ರನ್ ಗಳಿಸಿದರು. ಅಸಲಂಕ 2, ಕಮಿಲ್ ಮಿಶ್ರಾ 1, ವಿಕೆಟ್ ಕೀಪರ್ ಚಂಡೀಮಲ್ 9 ಹಾಗೂ ನಾಯಕ ಶನಕ 47 ರನ್ ಗಳಿಸಿ ಔಟಾಗದೇ ಉಳಿದರು. ಟೀಂ ಇಂಡಿಯಾ ಪರ ಬುಮ್ರಾ ಎರಡು ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಕಿತ್ತರು.