ಅಹ್ಮದಾಬಾದ್: ಭಾರತ ತಂಡದ ಉದಯೋನ್ಮುಖ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಕೋವಿಡ್ 19 ನಿಂದ ಚೇತರಿಸಿಕೊಂಡಿದ್ದು, ಐಸೊಲೇಸನ್ನಿಂದ ಹೊರಬಂದಿದ್ದಾರೆ. ಶಿಖರ್ ಧವನ್ ಕೂಡ ಸೋಂಕಿನಿಂದ ಗುಣಮುಖರಾಗಿದ್ದು, ಶುಕ್ರವಾರ ನಡೆಯಲಿರುವ ವಿಂಡೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ನಾಯಕ ರೋಹಿತ್ ಖಚಿತಪಡಿಸಿದ್ದಾರೆ.
ರುತುರಾಜ್ ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ಅವಕಾಶ ಪಡೆದಿದ್ದರೂ, ಒಂದು ಪಂದ್ಯದಲ್ಲೂ ಅವಕಾಶ ಪಡೆದಿರಲಿಲ್ಲ. ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಅವಕಾಶ ಪಡೆದರಾದರೂ ಪಂದ್ಯಕ್ಕೆ ಮೂರು ದಿನಗಳಿರುವಾಗ ಶಿಖರ್ ಧವನ್, ಶ್ರೇಯಸ್ ಜೊತೆಗೆ ಕೋವಿಡ್ 19ಗೆ ತುತ್ತಾಗಿದ್ದರಿಂದ ಈ ಸರಣಿಯಲ್ಲೂ ಆಡುವ ಅವಕಾಶ ಕಳೆದುಕೊಂಡರು.
ಇನ್ನು ರುತುರಾಜ್ ಅವರನ್ನು ಟಿ-20 ತಂಡಕ್ಕೆ ಆಯ್ಕೆಯಾಗಿಲ್ಲದಿರುವುದರಿಂದ, ಅವರು ಮುಂಬರುವ ರಣಜಿ ಟ್ರೋಫಿಯಲ್ಲಿ ಪಾಲ್ಗೊಳ್ಳುವುದಕ್ಕೆ ತಮ್ಮ ರಾಜ್ಯಕ್ಕೆ ಮರಳುವ ಸಾಧ್ಯತೆಯಿದೆ. ರುತುರಾಜ್ ಐಪಿಎಲ್ 2021ರಲ್ಲಿ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದರು. ಅಲ್ಲದೇ ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಲ್ಲೂ ಅದ್ಭುತ ಪ್ರದರ್ಶನ ತೋರಿದ್ದರಿಂದ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದರು.
ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದದ್ದು ನನ್ನ ನಿರ್ಧಾರಗಳಿಂದ, ಕ್ರೆಡಿಟ್ ಬೇರೆಯವರು ತೆಗೆದುಕೊಂಡಿದ್ದಾರೆ: ರಹಾನೆ ಕಿಡಿ