ಲಂಡನ್: ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್‌ನಲ್ಲೂ ಭಾರತ ತಂಡ ಮುಗ್ಗರಿಸಿದೆ. ಕಪ್ ಗೆಲ್ಲಲು ಕನಿಷ್ಠ 20-25 ದಿನಗಳ ಕಾಲ ತಯಾರಿ ನಡೆಸಬೇಕಿತ್ತು ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. 2013 ರಿಂದ ಐಸಿಸಿ ಈವೆಂಟ್‌ಗಳಲ್ಲಿ ಭಾರತ ತಂಡ ಪ್ರಶಸ್ತಿಯ ಬರ ಎದುರಿಸುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನ ಕೊನೆಯ ದಿನ 209 ರನ್ಗಳಿಂದ ಭಾರತ ಭಾರಿ ಸೋಲು ಅನುಭವಿಸಿದ್ದು, ಮುಖಭಂಗ ಅನುಭವಿಸಿದೆ.
ಟೆಸ್ಟ್ ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಕನಿಷ್ಠ 25 ದಿನಗಳ ತಯಾರಿ ಮಾಡಿಕೊಳ್ಳಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದ ಚೊಚ್ಚಲ WTC ಫೈನಲ್‌ನಲ್ಲೂ ಭಾರತ ನ್ಯೂಜಿಲ್ಯಾಂಡ್ ವಿರುದ್ಧ ರನ್ನರ್-ಅಪ್ ಆಗಿತ್ತು.
ಇಂದು ಟಿ-20 ಲೀಗ್ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಇಂತಹ ಕಾಲಘಟ್ಟದಲ್ಲಿ ಮೂರೂ ಫಾರ್ಮ್ಯಾಟ್ಗಳಿಗೆ ಆಟಗಾರರು ಹೊಂದಿಕೊಳ್ಳಲು ಕನಿಷ್ಠ ಒಂದು ತಿಂಗಳ ಕಾಲಾವಕಾಶವಾದರೂ ಬೇಕು. ಟಿ-20 ಸರಣಿಗಳಿಂದಾಗಿ ಆಟಗಾರರು ಬ್ಯುಸಿ ಶೆಡ್ಯೂಲ್ಡ್ಗಳಲ್ಲಿ ಆಡುವಂತಾಗಿದ್ದು, ಒತ್ತಡದಲ್ಲಿದ್ದಾರೆ. ಆದರೆ ಈ ಒತ್ತಡ ಹಾಗೂ ಬ್ಯುಸಿ ಶೆಡ್ಯೂಲ್ಡ್ ಎಂದರೆ ಕಷ್ಟ ಅಲ್ಲ ಅನ್ನುವುದು ನಾಯಕ ರೋಹಿತ್ ವಾದ.
"ನಾನು ಅದನ್ನು ಇಷ್ಟಪಡುತ್ತೇನೆ. ಆದರೆ ಸಮಯವಿದೆಯೇ? ಅದು ದೊಡ್ಡ ಪ್ರಶ್ನೆಯಾಗಿದೆ. ಆದರೆ ಪ್ರಾಮಾಣಿಕವಾಗಿ, ಅಂತಹ ದೊಡ್ಡ ಚಾಂಪಿಯನ್ಶಿಪ್ನಲ್ಲಿ ನೀವು ಎರಡೂ ತಂಡಗಳಿಗೆ ನ್ಯಾಯಯುತ ಅವಕಾಶಗಳನ್ನು ಒದಗಿಸಿಕೊಡಬೇಕು. ನಿಮಗೆ ಗೊತ್ತಾ, ಮೂರು ಪಂದ್ಯಗಳ ಸರಣಿ ಚೆನ್ನಾಗಿಯೇ ಇದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದೇ ದೊಡ್ಡ ಪ್ರಶ್ನೆ. ಆದರೆ ನಾನು ಇಂತಹ ಪಂದ್ಯಗಳನ್ನ ಇಷ್ಟಪಡುತ್ತೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಎರಡು ವರ್ಷಗಳ ಕಾಲ ಶ್ರಮಿಸುತ್ತೇವೆ. ಆದರೆ ಕೊನೆಯಲ್ಲಿ ನಮಗೆ ಒಂದೇ ಹೊಡೆತದ ಅವಕಾಶ ಇರುತ್ತದೆ. ಹಾಗಾಗಿ ಇದೊಂದು ಕಠಿಣ ಪರಿಸ್ಥಿತಿ. ನಿಮಗೇ ಗೊತ್ತಿದೆ ಟೆಸ್ಟ್ ಕ್ರಿಕೆಟ್ ಎಂದರೆ ಲಯವನ್ನು ಕಂಡುಕೊಳ್ಳುವುದು ಮತ್ತು ಆ ವೇಗವನ್ನು ಕಾಪಾಡಿಕೊಳ್ಳಬೇಕಿದೆ ಎಂದಿದ್ದಾರೆ ರೋಹಿತ್ ಶರ್ಮಾ.
ತಂಡದ ಬಹುತೇಕ ಸದಸ್ಯರು ಐಪಿಎಲ್‌ನಲ್ಲಿ ನಿರತರಾಗಿದ್ದರಿಂದ, ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ಗೆ ಎಲ್ಲರಿಗೂ ಒಟ್ಟಿಗೆ ಸೇರಿಸಿ ತರಬೇತಿ ನೀಡಲು ಅವಕಾಶ ಸಿಕ್ಕದ್ದು ಕೇವಲ ಒಂದು ವಾರ ಮಾತ್ರ. ಇದಕ್ಕೆ ಹೆಚ್ಚು ದೀರ್ಘವಾದ ಅವಧಿ ಬೇಕು ಎಂಬುದು ರೋಹಿತ್ ಶರ್ಮಾ ಮಾತು. "ತಾತ್ತ್ವಿಕವಾಗಿ ಇದು ಸತ್ಯವೂ ಹೌದು, ಈ ರೀತಿಯ ಈವೆಂಟ್ಗೆ ತಂಡವನ್ನು ಸಿದ್ಧಗೊಳಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ನಮ್ಮನ್ನು ನಾವು ಸಿದ್ಧಪಡಿಸಲು 25-30 ದಿನಗಳು ಅವಶ್ಯಕತೆ ಇದೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್ ಹೇಳಿದ್ದಾರೆ.
ಮುಂದಿನ WTC ಫೈನಲ್ ಅನ್ನು ಲಾರ್ಡ್ಸ್‌ನಲ್ಲಿ ಆಡಿಸಲಾಗುವುದು ಎಂದು ಐಸಿಸಿ ಈಗಾಗಲೇ ಹೇಳಿದೆ. ಆದರೆ ರೋಹಿತ್ ಈ ಆಟವನ್ನು ಎಲ್ಲಿ ಬೇಕಾದರೂ ಆಡಬಹುದು ಎಂದಿದ್ದಾರೆ "ನನ್ನ ಪ್ರಕಾರ, ನಾವು ಫೈನಲ್ ಅನ್ನು ಜೂನ್ನಲ್ಲೇ ಆಡಬೇಕೆಂದೇನು ಇಲ್ಲ. ಇದನ್ನು ವರ್ಷದ ಯಾವುದೇ ಸಮಯದಲ್ಲಿ ಆಡಬಹುದು. ಮತ್ತು ಇಂಗ್ಲೆಂಡ್‌ನಲ್ಲಿ ಮಾತ್ರವಲ್ಲದೇ ವಿಶ್ವದ ಎಲ್ಲಿಯಾದರೂ ಇದನ್ನು ಆಡಬಹುದು‘ ಎನ್ನುವುದು ರೋಹಿತ್ ಅವರ ಮಾತಾಗಿದೆ.