ಮೊಹಾಲಿ(ಪಂಜಾಬ್): ಏಷ್ಯಾ ಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಹೀಗಾಗಿ, ಮುಂಬರುವ ವಿಶ್ವಕಪ್ನಲ್ಲಿ ಅವರು ಕ್ಯಾಪ್ಟನ್ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆಂಬ ಮಾತು ಕೇಳಿ ಬರಲು ಶುರುವಾಗಿದ್ದವು. ಇದಕ್ಕೆ ಖುದ್ದಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ತೆರೆ ಎಳೆದಿದ್ದಾರೆ.
ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭಗೊಳ್ಳಲಿದ್ದು, ಅದಕ್ಕೂ ಮುಂಚಿತವಾಗಿ ತಂಡದ ನಾಯಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿ, ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ ಎಂದು ಹೇಳಿದ್ದಾರೆ.
ವಿಶ್ವಕಪ್ ಆರಂಭಕ್ಕೂ ಮುಂಚಿತವಾಗಿ ಕೆಲವೊಂದು ಪ್ರಯೋಗ ಮಾಡಲಾಗಿದ್ದು, ಅದರಲ್ಲಿ ನಾವು ಯಶಸ್ಸು ಕಂಡಿದ್ದೇವೆ. ವಿರಾಟ್ ಕೊಹ್ಲಿ ಅವರನ್ನು ಓಪನರ್ ಆಗಿ ಕಣಕ್ಕಿಳಿಸುವುದು ಒಂದು ಆಯ್ಕೆ. ಆದರೆ, ಟಿ20 ವಿಶ್ವ ಕಪ್ನಲ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಐಪಿಎಲ್ನಲ್ಲಿ ತಮ್ಮ ಫ್ರಾಂಚೈಸಿಗೋಸ್ಕರ ಅವರು ಓಪನರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ವಿಶ್ವಕಪ್ನಲ್ಲಿ ಅದು ಒಂದು ಆಯ್ಕೆ ಮಾತ್ರ ಎಂದರು.
ಇದನ್ನೂ ಓದಿ: 'ಇಂಥ ನಾನ್ಸೆನ್ಸ್ ಶುರು ಮಾಡ್ಬೇಡಿ..' ಕೊಹ್ಲಿ ಬ್ಯಾಟಿಂಗ್ ಆರ್ಡರ್ ಬದಲಿಸುವ ವಿಚಾರಕ್ಕೆ ಗಂಭೀರ್ ಗರಂ
ವಿಶ್ವಕಪ್ನಂತಹ ದೊಡ್ಡ ಟೂರ್ನಮೆಂಟ್ನಲ್ಲಿ ನಾವು ಆಡುವಾಗ ಆಯ್ಕೆಗಳು ಬೇಕಾಗುತ್ತವೆ. ಇದೀಗ ವಿರಾಟ್ ಕೊಹ್ಲಿ ಒಂದು ಆಯ್ಕೆಯಾಗಿರುವುದು ನಮಗೆ ಸಂತೋಷ. ಆದರೆ, ಕೆಲವೊಂದು ಪ್ರಯೋಗ ಮಾಡಿದಾಗ ಅದು ಶಾಶ್ವತವಾಗಿರಲ್ಲ. ಆಟಗಾರರ ಗುಣಮಟ್ಟ ಹಾಗೂ ಸಾಮರ್ಥ್ಯ ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದರು. ರಾಹುಲ್ ಬ್ಯಾಟಿಂಗ್ನಿಂದ ರನ್ ಹರಿದು ಬರ್ತಿಲ್ಲ. ಆದರೆ, ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂದರು.
ಕಳೆದ ಎರಡ್ಮೂರು ವರ್ಷಗಳಿಂದ ಅವರ ದಾಖಲೆ ನೋಡಿದ್ರೆ ಖಂಡಿತವಾಗಿ ರಾಹುಲ್ ಎಂತಹ ಆಟಗಾರ ಎಂಬುದು ನಿಮಗೆ ಗೊತ್ತಾಗುತ್ತದೆ. ಒಂದು ಪಂದ್ಯದಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದ್ದಾರೆಂಬ ಕಾರಣಕ್ಕಾಗಿ ಬದಲಾವಣೆ ಮಾಡುವ ಅಗತ್ಯವಿಲ್ಲ. ಇದರಲ್ಲಿ ನಮಗೆ ಯಾವುದೇ ಗೊಂದಲ್ಲವಿಲ್ಲ. ಕೆಎಲ್ ಒಪನರ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದರು.
ಜಸ್ಪ್ರೀತ್ ಬುಮ್ರಾ, ಹರ್ಷಲ್ ತಂಡಕ್ಕೆ ಮರಳಿರುವುದು ತಂಡಕ್ಕೆ ಶಕ್ತಿ ನೀಡಿದೆ. ಜಡೇಜಾ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ ತಂಡಕ್ಕೆ ಸೇರಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು. ಜಡೇಜಾ ಸ್ಥಾನ ತುಂಬಬಲ್ಲ ಸಾಮರ್ಥ್ಯ ಅಕ್ಷರ್ ಬಳಿ ಇದೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅದನ್ನು ಸಾಬೀತುಪಡಿಸಿದ್ದಾರೆ ಎಂದರು.
ಸಿರಾಜ್ ಬದಲಿಗೆ ಉಮೇಶ್ಗೆ ಮಣೆ: ಮೊಹಮ್ಮದ್ ಶಮಿ ಕೋವಿಡ್ಗೆ ಒಳಗಾಗಿರುವ ಕಾರಣ ಅನುಭವಿ ಉಮೇಶ್ ಯಾದವ್ಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ರೋಹಿತ್, ಸಿರಾಜ್ ಈಗಾಗಲೇ ಕೌಂಟಿ ಕ್ರಿಕೆಟ್ನಲ್ಲಿ ಆಡ್ತಿದ್ದು, ಅವರ ಮೇಲೆ ಮತ್ತಷ್ಟು ಒತ್ತಡ ಹಾಕಲು ಸಾಧ್ಯವಿಲ್ಲ. ಪ್ರಸಿದ್ಧ್ ಕೃಷ್ಣ ಗಾಯಗೊಂಡಿದ್ದಾರೆ. ಇನ್ನೂ ಆವೇಶ್ ಖಾನ್ ಅವರಿಗೆ ವಿಶ್ರಾಂತಿ ಅವಶ್ಯಕತೆ ಇದ್ದು, ಹೀಗಾಗಿ, ಉಮೇಶ್ ಯಾದವ್ಗೆ ಮಣೆ ಹಾಕಲಾಗಿದೆ ಎಂದರು. ಐಪಿಎಲ್ನಲ್ಲಿ ಅವರ ಪ್ರದರ್ಶನದ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು.