ಮುಂಬೈ: ಕಳಪೆ ಫಾರ್ಮ್ನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಸ್ಥಾನದ ಬಗ್ಗೆ ಈಗಾಗಲೇ ಅನೇಕರು ಪ್ರಶ್ನೆ ಮಾಡಿದ್ದಾರೆ. ಇದೀಗ ಸಿಎಸ್ಕೆ ಬ್ಯಾಟರ್ ರಾಬಿನ್ ಉತ್ತಪ್ಪ ಕೂಡ ಇದೇ ವಿಚಾರವಾಗಿ ಮಾತನಾಡಿದ್ದಾರೆ. ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಸ್ಥಾನವನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ರನ್ ಮಷಿನ್ ಪರ ಬ್ಯಾಟ್ ಬೀಸಿದ್ದಾರೆ.
2019ರಿಂದಲೂ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಶತಕ ಸಿಡಿದಿಲ್ಲ. ಜೊತೆಗೆ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಮುಕ್ತಾಯಗೊಂಡ ಸರಣಿಯಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬಂದಿಲ್ಲ. ಇದೇ ವಿಷಯವನ್ನಿಟ್ಟುಕೊಂಡು ಅನೇಕರು ಅವರ ವಿರುದ್ಧ ಟೀಕೆ ವ್ಯಕ್ತಪಡಿಸಿ, ತಂಡದಿಂದ ಕೈಬಿಡಬೇಕು ಎಂಬ ಮಾತು ಸಹ ಹೇಳಿದ್ದರು. ಈ ವಿಷಯಕ್ಕೆ ಕಿಡಿ ಕಾರಿರುವ ರಾಬಿನ್ ಉತ್ತಪ್ಪ, ವಿರಾಟ್ ಕೊಹ್ಲಿ ಒಂದರ ಹಿಂದೆ ಒಂದು ಶತಕ ಸಿಡಿಸಿದಾಗ ಅವರು ಹೇಗೆ ಆಡಬೇಕೆಂದು ಯಾರು ಹೇಳಲಿಲ್ಲ. ತಮ್ಮ ಬ್ಯಾಟಿಂಗ್ ಸಮಸ್ಯೆ ಪರಿಹರಿಸಿಕೊಂಡ ಬಳಿಕ ವಿರಾಟ್ ಮತ್ತೊಮ್ಮೆ ಉತ್ತುಂಗಕ್ಕೆ ತಲುಪುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ಫ್ರಾನ್ಸ್ನ ಗುಸ್ತಾವ್ ದಾಖಲೆ.. ಟಿ-20ಯಲ್ಲಿ ಶತಕ ಸಿಡಿಸಿದ ಅತಿ ಕಿರಿಯ
ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ರಾಬಿನ್ ಉತ್ತಪ್ಪ, ವಿರಾಟ್ ಕೊಹ್ಲಿ ಇನ್ನೂ 30-35 ಅಂತಾರಾಷ್ಟ್ರೀಯ ಶತಕ ಗಳಿಸುತ್ತಾರೆ. ಭಾರತಕ್ಕಾಗಿ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಅವರಲ್ಲಿದೆ. ವಿರಾಟ್ ಕೊಹ್ಲಿ ಏನು ಮಾಡಬೇಕು. ಯಾವ ರೀತಿಯಾಗಿ ಬ್ಯಾಟ್ ಬೀಸಬೇಕು ಮತ್ತು ಹೇಗೆ ಆಡಬೇಕು ಎಂಬುದರ ಬಗ್ಗೆ ಹೇಳುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ. ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಿಂದ ವಿರಾಟ್ ವಿಶ್ರಾಂತಿ ಪಡೆದುಕೊಂಡಿದ್ದಾರೆ.