ಅದು 2007ರ ಚೊಚ್ಚಲ ಟಿ20 ವಿಶ್ವಕಪ್. ಮಾಜಿ ನಾಯಕ ಮಹೇಂದ್ರ ಸಿಂಗ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಇತಿಹಾಸ ಬರೆದ ದಿನ. ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ 24 ವರ್ಷಗಳ ಬಳಿಕ ವಿಶ್ವಕಪ್ ಎತ್ತಿ ಹಿಡಿದು ದೇಶವನ್ನೇ ಸಂತಸದ ಕಡಲಲ್ಲಿ ತೇಲಿಸಿದ ದಿನ.
ಸೆಪ್ಟೆಂಬರ್ 24, ಭಾರತ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಎಂದಿಗೂ ಮರೆಯಲಾಗದ ದಿನವಾಗಿದೆ. ಕಾರಣ ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡ ವಿಜಯ ಕಹಳೆ ಮೊಳಗಿಸಿ ಟಿ20 ವಿಶ್ವಕಪ್ ಎದೆಗೇರಿಸಿಕೊಂಡ ದಿನಕ್ಕೆ ಇಂದಿಗೆ 15 ವರ್ಷ.
ಟಿ20 ಎಂಬ ಹೊಸ ಮಾದರಿಯ ಹೊಡಿಬಡಿ ಕ್ರಿಕೆಟ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಪರಿಚಯಿಸಿತ್ತು. ಅಂದು ಭಾರತ ತಂಡದ ಆಧಾರ ಸ್ಥಂಭಗಳಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ರನ್ನು ಬದಿಗಿಟ್ಟು ಯುವಕರನ್ನೇ ಆಯ್ದುಕೊಂಡ ಮಹೇಂದ್ರ ಸಿಂಗ್ ದೋನಿ ಇತಿಹಾಸ ನಿರ್ಮಿಸುತ್ತಾರೆ ಎಂಬ ನಂಬಿಕೆ ದೇಶಕ್ಯಾಕೆ ಅವರಿಗೇ ಇರಲಿಲ್ಲವೇನೋ.
ಬಲಾಢ್ಯ ತಂಡಗಳ ಮೇಲೆ ಅನನುಭವಿಗಳ ಸವಾರಿ: ಅನನುಭವಿ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ ದೋನಿ ಪಡೆ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ನ್ಯೂಜಿಲ್ಯಾಂಡ್ನಂತಹ ಬಲಾಢ್ಯ ತಂಡಗಳನ್ನು ಸದೆಬಡಿದು ಫೈನಲ್ಗೆ ಪ್ರವೇಶಿಸಿತ್ತು. ಅಂದು ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆದ ಅಂತಿಮ ಪಂದ್ಯವನ್ನು ಇಡೀ ಜಗತ್ತೇ ತುದಿಗಾಲ ಮೇಲೆ ನಿಂತು ವೀಕ್ಷಿಸಿತ್ತು.
ಸಾಂಪ್ರದಾಯಿಕ ತಂಡಗಳೆರಡು ಪ್ರಶಸ್ತಿಗಾಗಿ ಸೆಣಸಾಡುತ್ತಿರುವುದು ಕ್ರಿಕೆಟ್ನ ಕೌತುಕವನ್ನು ಇಮ್ಮಡಿಗೊಳಿಸಿತ್ತು. ಭಾರತ ಮೊದಲು ಬ್ಯಾಟ್ ಮಾಡಿ 5 ವಿಕೆಟ್ ಕಳೆದುಕೊಂಡ 157 ರನ್ ಗಳಿಸಿತ್ತು. ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ 75 ರನ್ ಬಾರಿಸಿದರೆ, ರೋಹಿತ್ ಶರ್ಮಾ 30 ರನ್ ಗಳಿಸಿ ತಂಡದ ಮೊತ್ತವನ್ನು 150 ಕ್ಕೆ ಹೆಚ್ಚಿಸಿದ್ದರು.
ಹೊಸ ಮಾದರಿಯ ಕ್ರಿಕೆಟ್ನ ಚೊಚ್ಚಲ ಪ್ರಶಸ್ತಿ ಗೆಲ್ಲುವ ಗುರಿಯಲ್ಲಿದ್ದ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದ ಭಾರತ, ಪಾಕಿಸ್ತಾನದ ಮಿಸ್ಬಾ ಉಲ್ ಹಕ್ರ ಹೋರಾಟವನ್ನು ಜೋಗಿಂದರ್ ಶರ್ಮಾ ಎಂಬ ಹೊಸ ಹುಡುಗ ಹತ್ತಿಕ್ಕಿ ಔಟ್ ಮಾಡುವ ಮೂಲಕ ದೇಶದ ಧ್ವಜವನ್ನು ಹಾರಿಸಿದ್ದರು. ಪಾಕಿಸ್ತಾನ ನಿಗದಿತ 20 ಓವರ್ಗಳಲ್ಲಿ 152 ರನ್ ಗಳಿಸಿ 5 ರನ್ಗಳಿಂದ ಸೋಲು ಕಂಡು ರನ್ನರ್ ಅಪ್ ಆಗಿತ್ತು.
1983 ರ ವಿಶ್ವಕಪ್ ವಿಕ್ರಮದ ಬಳಿಕ ಅಂದರೆ 24 ವಸಂತಗಳ ತರುವಾಯ ದೇಶ ಮತ್ತೊಮ್ಮೆ ವಿಶ್ವ ಕ್ರಿಕೆಟ್ನ ಅಧಿಪತಿಯಾಗಿತ್ತು. ಅನನುಭವಿ ತಂಡವನ್ನು ಮುನ್ನಡೆಸಿ ದೇಶ ಮೆಚ್ಚುವಂತಹ ಕೆಲಸ ಮಾಡಿದ್ದ ದೋನಿ ಕ್ರಿಕೆಟ್ ಇತಿಹಾಸ ಕಣ್ಮಣಿಯಾಗಿದ್ದರು.
ಬೌಲ್ ಔಟ್ ನೆನಪಿಸಿಕೊಂಡ ರಾಬಿನ್: ಅಂದಿನ ವಿಕ್ರಮದ ಭಾಗವಾಗಿದ್ದ ಇತ್ತೀಚೆಗಷ್ಟೇ ಕ್ರಿಕೆಟ್ ವಿದಾಯ ಹೇಳಿದ ಕನ್ನಡಿಗ ಉತ್ತಪ್ಪ ಅವರು ನೆನಪಿಸಿಕೊಂಡಿದ್ದಾರೆ. ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಉಭಯ ತಂಡಗಳು ರನ್ ಸಮಬಲ ಸಾಧಿಸಿದ್ದವು. ಪಂದ್ಯ ಡ್ರಾ ಆದಾಗ ಸೂಪರ್ 4 ಹಂತಕ್ಕೆ ಕ್ವಾಲಿಫೈ ಆಗಲು ಬೌಲ್ ಔಟ್ ನಡೆಸಲಾಯಿತು.
ಇದರಲ್ಲಿ ರಾಬಿನ್ ಉತ್ತಪ್ಪ, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಅವರು ಸತತವಾಗಿ ವಿಕೆಟ್ ಕೆಡವಿದರು. ಪಾಕಿಸ್ತಾನದ ಯಾವೊಬ್ಬ ಬೌಲರ್ ಒಂದು ವಿಕೆಟ್ ಕೂಡ ಕೆಡವದೇ 3-0 ಅಂತರದಲ್ಲಿ ಭಾರತ ಪಂದ್ಯವನ್ನು ಗೆದ್ದಿತ್ತು.
"ಇದರಲ್ಲಿ ನಾನು ವಿಕೆಟ್ ಬೌಲ್ ಔಟ್ ಮಾಡಿ ಕ್ಯಾಪ್ ತೆಗೆದು ನಾಲ್ಕು ದಿಕ್ಕಿಗೂ ಶಿರಬಾಗಿ ವಂದಿಸಿದ್ದು ಮರೆಯಲಾಗದ ಕ್ಷಣ. ಅದನ್ನು ನಾನು ಇಂದಿಗೂ ಅಚ್ಚರಿಯ ಕಣ್ಣಿಂದಲೇ ನೋಡುತ್ತೇನೆ. ಆ ವಿಕ್ರಮಕ್ಕೆ 15 ವರ್ಷ ಸಂದಿವೆ. ಇದು ಕೆಲ ದಿನಗಳ ಹಿಂದಷ್ಟೇ ನಡೆದಿದೆಯೇನೋ ಎಂಬಂತಿದೆ" ಎಂದು ರಾಬಿನ್ ಉತ್ತಪ್ಪ ನೆನಪಿಸಿಕೊಂಡರು.
"ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಭಾರತ ತಂಡ ಮತ್ತೊಮ್ಮೆ ಟ್ರೋಫಿಯನ್ನು ಗೆದ್ದು ಇತಿಹಾಸ ಮರುಕಳಿಸುವಂತೆ ಮಾಡಲಿ. ತಂಡದ ಮಿಷನ್ ಮೆಲ್ಬೋರ್ನ್ ಯಶಸ್ವಿಯಾಗಲಿ" ಎಂದು ರಾಬಿನ್ ಹೇಳಿದರು.