ದುಬೈ: ಕನ್ನಡಿಗ ರಾಬಿನ್ ಉತ್ತಪ್ಪ ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಪದಾರ್ಪಣೆ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಟ್ರೋಪಿ ಗೆದ್ದಿರುವ ಎಲ್ಲ ತಂಡಗಳ ಪರ ಆಡಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ರಾಬಿನ್ ಉತ್ತಪ್ಪ ಐಪಿಎಲ್ನಲ್ಲಿ 189 ಪಂದ್ಯಗಳನ್ನಾಡಿದ್ದು, 4,607 ರನ್ಗಳಿಸಿದ್ದಾರೆ. ಒಟ್ಟು 14 ಆವೃತ್ತಿಗಳಲ್ಲಿ ಉತ್ತಪ್ಪ 6 ಫ್ರಾಂಚೈಸಿಗಳಲ್ಲಿ ಆಡಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಐಪಿಎಲ್ನಲ್ಲಿ ತಮ್ಮ ಇನ್ನಿಂಗ್ಸ್ ಆರಂಭಿಸಿದ ಅವರು ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪುಣೆ ವಾರಿಯರ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಇಂದು ಚೆನ್ನೈ ಸೂಪರ್ ಕಿಂಗ್ಸ್ ಪರವೂ ಪದಾರ್ಪಣೆ ಮಾಡಿದ್ದಾರೆ.
ಮೂರು ಯಶಸ್ವಿ ಐಪಿಎಲ್ ತಂಡಗಳ ಪರ ಆಡಿರುವ 3ನೇ ಆಟಗಾರ
ಇಂದಿನ ಪಂದ್ಯದಲ್ಲಿ CSK ಪರ ಪದಾರ್ಪಣೆ ಮಾಡುವ ಮೂಲಕ ಐಪಿಎಲ್ನಲ್ಲಿ ಯಶಸ್ಸು ಸಾಧಿಸಿರುವ ಅಗ್ರ 3 ತಂಡಗಳ ಪರ ಆಡಿದ 3ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಉತ್ತಪ್ಪ 5 ಬಾರಿ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೊದಲ ಆವೃತ್ತಿ ಆಡಿದ್ದರು. ನಂತರ 2 ಬಾರಿ ಚಾಂಪಿಯನ್ ಆಗಿರುವ ಕೋಲ್ಕತ್ತಾ ತಂಡದಲ್ಲಿ ಕೆಲವು ವರ್ಷಗಳ ಕಾಲ ಆಡಿದ್ದರು. ಇದೀಗ 3 ಬಾರಿ ಚಾಂಪಿಯನ್ ಆಗಿರುವ ಹಾಗೂ ಹೆಚ್ಚು ಫೈನಲ್ ಆಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ.
ಈ ಹಿಂದೆ ಭಾರತದ ಲೆಜೆಂಡರಿ ಸ್ಪಿನ್ನರ್ಗಳಲ್ಲಿ ಒಬ್ಬರಾದ ಹರ್ಭಜನ್ ಸಿಂಗ್ ಮತ್ತು ನ್ಯೂಜಿಲ್ಯಾಂಡ್ನ ಟಿಮ್ ಸೌಥಿ ಈ ಮೂರು ತಂಡಗಳಲ್ಲೂ ಆಡಿದ್ದಾರೆ. ಪ್ರಸ್ತುತ ಸೌಥಿ ಮತ್ತು ಹರ್ಭಜನ್ ಕೆಕೆಆರ್ ಪರ ಆಡುತ್ತಿದ್ದಾರೆ.