ಮುಂಬೈ : ವಿಜಯ ಹಜಾರೆ ಟ್ರೋಪಿಯಲ್ಲಿ ಆಲ್ರೌಂಡರ್ ಪ್ರದರ್ಶನ ತೋರಿ ಹಿಮಾಚಲ ಪ್ರದೇಶ ತಂಡಕ್ಕೆ ಚೊಚ್ಚಲ ಪ್ರಶಸ್ತಿ ತಂದುಕೊಟ್ಟಿದ್ದ ರಿಷಿ ಧವನ್ ಮತ್ತು ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಮಿಳುನಾಡಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ದಕ್ಕಿಸಿಕೊಟ್ಟಿದ್ದ ಶಾರುಖ್ ಖಾನ್ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸೀಮಿತ ಓವರ್ಗಳ ಸರಣಿಯಲ್ಲಿ ಭಾರತ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ.
ಈಗಾಗಲೇ ಭಾರತ ತಂಡದಲ್ಲಿ ಪದಾರ್ಪಣೆ ಮಾಡಿದ ಅನುಭವವುಳ್ಳ ರಿಷಿ ಧವನ್ ಕಳೆದ ವಿಜಯ ಹಜಾರೆ ಟ್ರೋಫಿಯಲ್ಲಿ 8 ಇನ್ನಿಂಗ್ಸ್ಗಳಲ್ಲಿ 76ರ ಸರಾಸರಿ ಮತ್ತು 128ರ ಸ್ಟ್ರೈಕ್ರೇಟ್ನಲ್ಲಿ 458 ರನ್ಗಳಿಸಿದ್ದರು. ಬೌಲಿಂಗ್ನಲ್ಲೂ ಮಿಂಚಿದ್ದ ಅವರು 6ರ ಎಕಾನಮಿಯಲ್ಲಿ 17 ವಿಕೆಟ್ ಪಡೆದಿದ್ದರು.
ಬೌಲಿಂಗ್ ಆಲ್ರೌಂಡರ್ಗಳ ಹುಡುಕಾಟದಲ್ಲಿರುವ ಟೀಮ್ ಇಂಡಿಯಾ ಧವನ್ಗೆ ತವರಿನಲ್ಲಿ ಏಕದಿನ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಶಾರುಖ್ ಖಾನ್ ಕಳೆದ ಎರಡು ಆವೃತ್ತಿಯ ಸೈಯದ್ ಮುಷ್ತಾಕ್ ಅಲಿ ಟಿ20ಯಲ್ಲಿ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಈ ಬಾರಿಯ ವಿಜಯ ಹಜಾರೆ ಫೈನಲ್ನಲ್ಲಿ 21 ಎಸೆತಗಳಲ್ಲಿ 42, ಲೀಗ್ನಲ್ಲಿ ಮುಂಬೈ ವಿರುದ್ಧ 35 ಎಸೆತಗಳಲ್ಲಿ 66, ಬೆಂಗಾಲ್ ವಿರುದ್ಧ 12 ಎಸೆತಗಳಲ್ಲಿ 32, ಕರ್ನಾಟಕ ವಿರುದ್ಧ 39 ಎಸೆತಗಳಲ್ಲಿ 79 ರನ್ಗಳಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟಿ20ಯ ಫೈನಲ್ನಲ್ಲಿ ಕರ್ನಾಟಕ ವಿರುದ್ಧ 15 ಎಸೆತಗಳಲ್ಲಿ 33ರನ್ಗಳಿಸಿ ಚಾಂಪಿಯನ್ ಆಗಲು ನೆರವಾಗಿದ್ದರು.
ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲ್ಲಿಸಬಲ್ಲ ಸಾಮರ್ಥ್ಯವಿರುವ ಶಾರುಖ್ ಖಾನ್ಗೆ ವಿಂಡೀಸ್ ವಿರುದ್ಧ ಟಿ20 ತಂಡದಲ್ಲಿ ಮತ್ತು ರಿಷಿ ಧವನ್ಗೆ ಏಕದಿನ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ನಾನು ಕಂಡಂತಹ ತೀಕ್ಷ್ಣಕ್ರಿಕೆಟ್ ಮೈಂಡ್ ಹೊಂದಿದವರಲ್ಲಿ ಎಂಎಸ್ ಧೋನಿ ಕೂಡ ಒಬ್ಬರು : ಗ್ರೇಗ್ ಚಾಪೆಲ್