ಮುಂಬೈ: 15ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿಯ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಹರ್ಷಲ್ ಪಟೇಲ್ ಅವರ ಸಹೋದರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹೀಗಾಗಿ ಅವರು ಮನೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದ ನಂತರ ಹರ್ಷಲ್ ಬಯೋಬಬಲ್ನಿಂದ ಹೊರಬಂದಿದ್ದಾರೆ.
31 ವರ್ಷದ ಆಲ್ರೌಂಡರ್ ಕಳೆದ ಆವೃತ್ತಿಯಲ್ಲಿ ಗರಿಷ್ಠ ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಗೌರವ ಪಡೆದಿದ್ದರು. ನಿನ್ನೆ ಮುಂಬೈ ವಿರುದ್ಧದ ಪಂದ್ಯದಲ್ಲೂ ರೋಹಿತ್ ಶರ್ಮಾ ಸೇರಿದಂತೆ 2 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. "ಹರ್ಷಲ್ ಅವರ ಸಹೋದರಿ ಮೃತಪಟ್ಟಿದ್ದಾರೆ. ಮುಂಬೈ ವಿರುದ್ಧದ ಪಂದ್ಯದ ಬಳಿಕ ಅವರು ತಂಡಕ್ಕೆ ಮರಳಲಿದ್ದಾರೆ. ಇದೀಗ ಪುಣೆಯಿಂದ ನೇರವಾಗಿ ತಮ್ಮ ಮನೆಗೆ ತೆರಳಿದ್ದಾರೆ" ಎಂದು ಐಪಿಎಲ್ ಮೂಲಗಳು ಪಿಟಿಐಗೆ ಮಾಹಿತಿ ನೀಡಿವೆ.
ವರದಿಗಳ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 12ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪೈಪೋಟಿ ನಡೆಸಲಿದ್ದು, ಈ ಪಂದ್ಯಕ್ಕೂ ಮುನ್ನ ಹರ್ಷಲ್ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:IPL 2022: ಆರ್‌ಸಿಬಿಗೆ ಹ್ಯಾಟ್ರಿಕ್ ಜಯ.. ಮುಂಬೈಗೆ ಸತತ ನಾಲ್ಕನೇ ಸೋಲು