ಮುಂಬೈ : ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಳಪೆ ಬೌಲಿಂಗ್ ಪ್ರದರ್ಶನ ತೋರಿ ಸೋಲು ಕಂಡಿರುವ ಆರ್ಸಿಬಿ ಶನಿವಾರ ಡೆಲ್ಲಿ ವಿರುದ್ಧ ಕಣಕ್ಕಿಳಿಯುತ್ತಿದೆ. ಕಳೆದ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದ ಹರ್ಷಲ್ ಪಟೇಲ್ ಕಮ್ಬ್ಯಾಕ್ ಮಾಡಿರುವುದರಿಂದ ಬೌಲಿಂಗ್ ವಿಭಾಗಕ್ಕೆ ಬಲ ಬಂದಿದೆ.
ಪ್ರಸ್ತುತ ಆವೃತ್ತಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ ಆರ್ಸಿಬಿ 3ರಲ್ಲಿ ಜಯ ಮತ್ತು 2ರಲ್ಲಿ ಸೋಲುಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಒಂದೆರಡು ಪಂದ್ಯಗಳಲ್ಲಿ ವಿದೇಶಿ ಆಟಗಾರರ ಅಲಭ್ಯತೆಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಆದರೆ, ವಾರ್ನರ್ ತಂಡಕ್ಕೆ ಬಂದ ನಂತರ ಅವರ ಆರಂಭಿಕ ಬ್ಯಾಟಿಂಗ್ ಬಲ ದುಪ್ಪಟ್ಟಾಗಿದೆ. ಅಲ್ಲದೆ ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 200+ ರನ್ ಗಳಿಸಿ ಗೆಲುವು ಸಾಧಿಸಿದೆ.
ಗಾಯದ ಕಾರಣ ಡೆಲ್ಲಿ ತಂಡ ಸ್ಟಾರ್ ಆಲ್ರೌಂಡರ್ ಮಿಚೆಲ್ ಮಾರ್ಷ್ ಸೇವೆ ಕಳೆದುಕೊಂಡಿತ್ತು. ಪಾಕಿಸ್ತಾನ ಪ್ರವಾಸದಲ್ಲಿ ಗಾಯಗೊಂಡಿರುವ ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಡೆಲ್ಲಿ ಆರಂಭಿಕರಾದ ಪೃಥ್ವಿ ಶಾ ಮತ್ತು ವಾರ್ನರ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಮಾರ್ಷ್ ಆಗಮನ ಖಚಿತವಾದರೆ ನಾಯಕ ರಿಷಭ್ ಪಂತ್ ಮಧ್ಯಮ ಕ್ರಮಾಂಕಕ್ಕೆ ಮರಳಲಿದ್ದಾರೆ.
ಇತ್ತ ಆರ್ಸಿಬಿ ಕೂಡ ಕಳೆದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಸೇವೆಯನ್ನು ತುಂಬಾ ಮಿಸ್ ಮಾಡಿಕೊಂಡಿತ್ತು. ಅವರಿಲ್ಲದೆ ಡೆತ್ ಓವರ್ಗಳಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟಿತ್ತು. ಹಸರಂಗ ಕೆಲವು ಓವರ್ ಮಾಡಿದರಾದರೂ ದುಬಾರಿಯಾಗಿದ್ದರು. ಇದೀಗ ಹರ್ಷಲ್ ಕಮ್ಬ್ಯಾಕ್ ಬೌಲಿಂಗ್ ವಿಭಾಗಕ್ಕೆ ಬಲ ತರಲಿದೆ. ಆದರೆ, ಆರ್ಸಿಬಿ ದೊಡ್ಡ ಸಮಸ್ಯೆ ಎಂದರೆ ವಿರಾಟ್ ಕೊಹ್ಲಿ ಮತ್ತು ಪ್ಲೆಸಿಸ್ ಫಾರ್ಮ್. ಈ ಇಬ್ಬರು ಲೆಜೆಂಡರಿ ಆಟಗಾರರು ಈ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಬೇಕಿದೆ.
ತಂಡದ ಸಕಾರಾತ್ಮಕ ಅಂಶವೆಂದರೆ ಆರ್ಸಿಬಿ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ಶಹಬಾಜ್, ಪ್ರಭು ದೇಸಾಯಿ ಮತ್ತು ದಿನೇಶ್ ಕಾರ್ತಿಕ್ ಸಿಎಸ್ಕೆ ವಿರುದ್ಧ ಅದ್ಭುತ ಬ್ಯಾಟ್ ಬೀಸಿದ್ದರು. ಬೆಂಗಳೂರು ತಂಡ ಅದೇ ಪ್ರದರ್ಶನವನ್ನು ಈ ಪಂದ್ಯದಲ್ಲೂ ನಿರೀಕ್ಷಿಸುತ್ತಿದೆ.
ಮುಖಾಮುಖಿ : ಎರಡೂ ತಂಡಗಳೂ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್ಸಿಬಿ 16-10ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಸಂಭಾವ್ಯ XI : ಡೇವಿಡ್ ವಾರ್ನರ್, ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಷಬ್ ಪಂತ್ (ನಾಯಕ/ವಿಕೀ), ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್
ಸಂಭಾವ್ಯ XI : ಫಾಫ್ ಡು ಪ್ಲೆಸಿಸ್(ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್
ಇದನ್ನೂ ಓದಿ:ತ್ರಿಪಾಠಿ, ಮಾರ್ಕ್ರಮ್ ಆಟಕ್ಕೆ ಒಲಿದ ಜಯ.. ಕೆಕೆಆರ್ ವಿರುದ್ಧ ಸನ್ರೈಸರ್ಸ್ಗೆ 7 ವಿಕೆಟ್ ಗೆಲುವು