ನವದೆಹಲಿ: ಯುವ ಆಲ್‌ರೌಂಡರ್ ರಾಜ್ ಬಾವಾ ಮೊದಲ ಬಾರಿಗೆ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 22ರಿಂದ ಚೆನ್ನೈನಲ್ಲಿ ಆರಂಭವಾಗಲಿರುವ ನ್ಯೂಜಿಲ್ಯಾಂಡ್ ಎ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಸಂಜು ಸ್ಯಾಮ್ಸನ್ ನೇತೃತ್ವದ ತಂಡದಲ್ಲಿ ಬಾವಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಸರಣಿಯ ಮೊದಲ ಪಂದ್ಯ ಸೆಪ್ಟೆಂಬರ್ 22, ಎರಡನೇ ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ ಸೆ. 25 ಮತ್ತು 27ರಂದು ನಡೆಯಲಿವೆ. ದುಲೀಪ್ ಟ್ರೋಫಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಪೃಥ್ವಿ ಶಾ, ಜಿಂಬಾಬ್ವೆಯಲ್ಲಿ ನಡೆದ ಏಕದಿನ ಸರಣಿಯ ಭಾಗವಾಗಿದ್ದ ಹೆಚ್ಚಿನ ಆಟಗಾರರು ಮತ್ತೆ ಭಾರತ ಎ ತಂಡಕ್ಕೆ ಮರಳಿದ್ದಾರೆ.
ರಾಜ್ ಬಾವಾ, ಭಾರತದ U-19 ವಿಶ್ವಕಪ್ ವಿಜೇತ ತಂಡದ ಸ್ಟಾರ್ಗಳಲ್ಲೊಬ್ಬರು. ಮಧ್ಯಮ ವೇಗದ ಬೌಲರ್ ಮತ್ತು ಎಡಗೈ ಆಕ್ರಮಣಕಾರಿ ಬ್ಯಾಟರ್ ಆಗಿರುವ ಅವರು ಚಂಡೀಗಢ ತಂಡದ ಪರ ಕೇವಲ ಎರಡು ರಣಜಿ ಟ್ರೋಫಿ ಪಂದ್ಯಗಳನ್ನು ಆಡಿದ್ದಾರೆ. ಹೀಗಿರುವಾಗಲೇ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯ ಗಮನ ಸೆಳೆದಿರುವ ಬಾವಾ, ಭವಿಷ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಬ್ಯಾಕ್ -ಅಪ್ ಆಟಗಾರ ಎಂದೂ ಹೇಳಲಾಗುತ್ತಿದೆ.
ಆಲ್ರೌಂಡರ್ಗಳಾದ ಶಿವಂ ದುಬೆ ಮತ್ತು ವಿಜಯ್ ಶಂಕರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರೀಕ್ಷಿತ ಗಮನ ಸೆಳೆಯುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಆಯ್ಕೆಗಾರರು ಬಾವಾ ಅವರನ್ನು ಪರಿಗಣಿಸಲು ಉತ್ಸುಕರಾಗಿದ್ದಾರೆ. ಭಾರತವು ಹಲವು ಸ್ಪಿನ್ ಬೌಲಿಂಗ್ ಆಲ್ರೌಂಡರ್ಸ್ ಆಯ್ಕೆ ಹೊಂದಿದ್ದರೂ ಕೂಡ, ಉತ್ತಮ ಕೆಳ ಮಧ್ಯಮ ಕ್ರಮಾಂಕದ ಆಕ್ರಮಣಕಾರಿ ಬ್ಯಾಟರ್ ಹಾಗೂ ವೇಗದ ಬೌಲರ್‌ಗಳಿಲ್ಲ. ಬಾವಾ ಅವರ ಆಲ್‌ರೌಂಡ್ ಸಾಮರ್ಥ್ಯ ಪರಿಶೀಲಿಸಿದ ಬಳಿಕ ಹಿರಿಯರ ತಂಡಕ್ಕೆ ಆಯ್ಕೆ ಮಾಡಲು ಪರಿಗಣಿಸುವ ಸಾಧ್ಯತೆ ದಟ್ಟವಾಗಿದೆ.
ಭಾರತ ಎ ತಂಡ: ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಸಂಜು ಸ್ಯಾಮ್ಸನ್ (ನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಶಭಾಜ್ ಅಹ್ಮದ್, ರಾಹುಲ್ ಚಹರ್, ತಿಲಕ್ ವರ್ಮಾ, ಕುಲದೀಪ್ ಸೇನ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ನವದೀಪ್ ಸೈನಿ, ರಾಜ್ ಅಂಗದ್ ಬಾವಾ.
ಇದನ್ನೂ ಓದಿ: 'ಟಿ20 ವಿಶ್ವಕಪ್ನಲ್ಲಿ ಪಾಕ್ ನಾಕೌಟ್ ಹಂತದಲ್ಲೇ ಹೊರಬೀಳಬಹುದು': ಶೋಯೆಬ್ ಅಖ್ತರ್