ಮುಂಬೈ: ಕೋವಿಡ್ 19 ಸಾಂಕ್ರಾಮಿಕದಿಂದ ತಾಯಿಯನ್ನು ಕಳೆದುಕೊಂಡಿರುವ ನೋವಿನಲ್ಲಿರುವ ಮಹಿಳಾ ಕ್ರಿಕೆಟರ್ ಪ್ರಿಯಾ ಪೂನಿಯಾಗೆ ಅವರ ತಂದೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಉದಾಹರಣೆಯಾಗಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಪೂನಿಯಾ ತಾಯಿ ಸರೋಜಾ ಸೋಮವಾರ ಕೋವಿಡ್ 19ನಿಂದ ಸಾವೀಗೀಡಾಗಿದ್ದರು. ಪ್ರಿಯಾ ಮುಂದಿನ ತಿಂಗಳು ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕದಿನ ಮತ್ತು ಟಿ-20 ತಂಡದ ಭಾಗವಾಗಿರುವ ಕಾರಣ ತಾಯಿಯನ್ನು ಕಳೆದುಕೊಂಡಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಸುದೀರ್ಘ ಪ್ರಯಾಣ ಕೈಗೊಳ್ಳುವುದರ ಬಗ್ಗೆ ಚಿಂತೆಯಲ್ಲಿದ್ದರು. ಆದರೆ, ಅವರ ತಂದೆ ಸುರೇಂದ್ರ ಮಗಳಿಗೆ ಧೈರ್ಯ ತುಂಬಿ ಇಂಗ್ಲೆಂಡ್ಗೆ ತೆರಳಲು ಕೊಹ್ಲಿಯ ಕಥೆಯನ್ನು ಹೇಳಿದ್ದಾರೆ,
ವಿರಾಟ್ ಕೊಹ್ಲಿ ರಣಜಿ ಪಂದ್ಯವನ್ನಾಡುವ ವೇಳೆ ಅವರ ತಂದೆಯನ್ನು ಕಳೆದುಕೊಂಡಿದ್ದರು ಎಂದು ಹೇಳಿ ಪ್ರಿಯಾಳನ್ನು ಪ್ರೇರೇಪಿಸಿದ್ದೇನೆ. ಕೊಹ್ಲಿ ಕಠಿಣ ಸಂದರ್ಭದಲ್ಲಿಯೂ ಅವರು ತಂದೆಯ ಇಷ್ಟದಂತೆ ಕ್ರಿಕೆಟ್ ಆಡಿದ್ದರು. ಇದೀಗ ನಮಗೂ ಅಂತಹ ಕಠಿಣ ಸಮಯ ಎದುರಾಗಿದೆ. ಮಾನಸಿಕವಾಗಿ ನಾವು ಬಲಿಷ್ಠರಾಗಬೇಕಿದೆ. ಜೀವನದಲ್ಲಿ ಇಂತಹ ಕಠಿಣ ಸವಾಲುಗಳು ಎದುರಾಗುತ್ತಿರುತ್ತವೆ. ನಾವು ಅವುಗಳ ವಿರುದ್ಧ ಹೋರಾಡುತ್ತಾ ಮುಂದೆ ಸಾಗಬೇಕು ಎಂದು ನಾನು ಮಗಳಿಗೆ ಹೇಳಿದ್ದೇನೆ.
ಪ್ರಿಯಾ ನನ್ನ ಮಾತನ್ನು ಅರ್ಥ ಮಾಡಿಕೊಂಡಿದ್ದಾಳೆ, ಅವಳು ಆಸ್ಟ್ರೇಲಿಯಾಗೆ ತೆರಳಲು ಸಿದ್ಧರಿರುವುದಾಗಿ ಹೇಳಿದ್ದಾಳೆ ಎಂದು ಅವರು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಮ್ಮ ಮಡದಿಯ ಬಗ್ಗೆ ಮಾತನಾಡಿ, ಅವರು ಚೆನ್ನಾಗಿದ್ದರು. ಆದರೆ, ಆಮ್ಲಜನಕ ಪೂರೈಕೆಯ ಅಡಚಣೆಯ ನಂತರ, ಅವರಲ್ಲಿ ಆಮ್ಲಜನಕದ ಮಟ್ಟ ಕುಸಿಯಿತು. ನಂತರ ಅವರನ್ನು ವೆಂಟಿಲೇಟರ್ನಲ್ಲಿರಿಸಿದೆವಾದರೂ, ಅವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಭಾವುಕರಾದರು.
ಇದನ್ನು ಓದಿ:ದಿ ಫ್ಲೈಯಿಂಗ್ ಸಿಖ್ ಮಿಲ್ಕಾ ಸಿಂಗ್ಗೆ ಕೋವಿಡ್ 19 ಪಾಸಿಟಿವ್