ಮೆಲ್ಬೋರ್ನ್: ವೆಸ್ಟ್ ಇಂಡೀಸ್ ತಂಡದ ಮುಖ್ಯ ಕೋಚ್ ಫಿಲ್ ಸಿಮನ್ಸ್ ತಮ್ಮ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ್ದಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡ ಸೂಪರ್ 12 ಸುತ್ತಿಗೂ ಅರ್ಹತೆ ಪಡೆಯಲು ವಿಫಲರಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ಸಿಮನ್ಸ್ ಅವರ ರಾಜೀನಾಮೆ ವಿಚಾರವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಇಂದು ಖಚಿತ ಪಡಿಸಿದೆ. ಅವರ ಈ ದಿಢೀರ್ ನಿರ್ಧಾರಿಂದ ಹಲವರು ಕ್ರಿಕೆಟ್ ತಾರೆಯರು ಅಚ್ಚರಿ ಹೊರಹಾಕಿದ್ದಾರೆ.
ಕ್ರಿಕೆಟ್ ಶಿಶುಗಳು ಎನಿಸಿರುವ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹೀನಾಯ ಸೋಲನುಭವಿಸಿದ್ದು ಅವರಿಗೆ ಅರಗಿಸಿಕೊಳ್ಳಲಾರದ ನೋವು ತಂದಿತು. ಕ್ರಿಕೆಟ್ ಶಿಶು ಐರ್ಲೆಂಡ್ ತಂಡವು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಸೂಪರ್ 12 ಹಂತವನ್ನು ತಲುಪಿದ್ರೆ, ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ವಿಶ್ವಕಪ್‌ನಿಂದ ಹೊರಬೀಳುವ ಮೂಲಕ ಭಾರಿ ಮುಖಭಂಗ ಅನುಭವಿಸಿತು. ಈ ಕಾರಣದಿಂದ ಬಲಿಷ್ಠ ತಂಡವೊಂದು ಟಿ20 ವಿಶ್ವಕಪ್‌ನ ಮೊದಲ ಹಂತದಲ್ಲೇ ಹೊರಬಿದ್ದಿರುವುದು, ನುಂಗಲಾರದ ತುತ್ತಾಗಿತ್ತು. ಇದರ ಪರಿಣಾಮ ಮುಖ್ಯ ಕೋಚ್ ಫಿಲ್ ಸಿಮನ್ಸ್ ತಮ್ಮ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದು ಕೇವಲ ಆಟಗಾರರಿಗೆ ಮಾತ್ರವೇ ನೋವುಂಟು ಮಾಡಿಲ್ಲ. ಬದಲಾಗಿ ನಾವು ಪ್ರತಿನಿಧಿಸುವ ರಾಷ್ಟ್ರಗಳಿಗೂ ಆಘಾತ ನೀಡಿದೆ. ಇದು ಅತ್ಯಂತ ಬೇಸರದ ಹಾಗೂ ಕಠಿಣವಾದ ಹಿನ್ನಡೆಯಾಗಿದ್ದು, ಇದರಿಂದ ವಾಪಾಸಾಗಲು ಸಮಗೆ ಸಾಧ್ಯವಾಗಲಿಲ್ಲ. ನಮ್ಮ ಸಾಮರ್ಥ್ಯ ಸಾಕಾಗಲಿಲ್ಲ. ಹೀಗಾಗಿ ಈಗ ನಾವು ಟೂರ್ನಯಲ್ಲಿ ಭಾಗವಹಿಸದೆಯೇ ಟೂರ್ನಿಯನ್ನು ನೋಡಬೇಕಿದೆ. ಇದನ್ನು ಅರಗಿಸಿಕೊಳ್ಳಲಲು ಸಾಧ್ಯವಾಗುತ್ತಿಲ್ಲ. ನಮ್ಮ ಅಭಿಮಾನಿ ಹಾಗೂ ಬೆಂಬಲಿಗರಲ್ಲಿ ಕ್ಷಮೆಯಾಚನೆ ಮಾಡುತ್ತಿದ್ದೇನೆ. ವೈಯಕ್ತಿಕವಾಗಿ ಈ ಹೊಣೆ ಹೊತ್ತುಕೊಳ್ಳುವ ಮೂಲಕ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ ಎಂದು ಫಿಲ್ ಸೈಮನ್ ಹೇಳಿಕೊಂಡಿರುವುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಮಂಗಳವಾರ ಪ್ರಕಟನೆಯಲ್ಲಿ ತಿಳಿಸಿದೆ.
ವೆಸ್ಟ್ ಇಂಡೀಸ್ ಮುಖ್ಯ ಕೋಚ್ ಆಗಿ ಹಲವು ಸವಾಲಿನ ಅಂಶಗಳ ಜೊಗೆ ಅಧಿಕಾರವನ್ನು ನಾನು ಖುಷಿ ಖುಷಿಯಾಗಿ ಆನಂದಿಸಿದ್ದೇನೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ. ತಂಡವನ್ನು ಮತ್ತೆ ಕಟ್ಟಲು ಇನ್ನೂ ಹಲವು ಬಲಿಷ್ಠ ವ್ಯಕ್ತಿಗಳಿದ್ದಾರೆ. ಆ ಕೆಲಸವನ್ನು ಅವರು ಮಾಡುತ್ತಾರೆಂದು ನಾನು ಅಂದುಕೊಂಡಿರುವೆ ಎಂದು ಫಿಲ್ ಸಿಮನ್ಸ್ ಹೇಳಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಿಕಿ ಸ್ಕೆರಿಟ್ ಸೇರಿದಂತೆ ಹಲವರು ಫಿಲ್ ಸಿಮನ್ಸ್ ಅವರ ಸೇವೆಗೆ ಧನ್ಯವಾದ ಹೇಳಿದ್ದಾರೆ. 59ರ ಹರೆಯದ ಫಿಲ್ ಸಿಮನ್ಸ್ ಅವರಿಗೆ ನವೆಂಬರ್ 30 ರಿಂದ ಡಿಸೆಂಬರ್ 12 ರವರೆಗೆ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯು ಅವರ ಕೊನೆಯ ಸರಣಿಯಾಗಿರಲಿದೆ. 2016 ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ವೆಸ್ಟ್ ಇಂಡೀಸ್ ತಂಡವು T20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಆಗ ಸಿಮನ್ಸ್ ತಂಡದ ಮುಖ್ಯ ಕೋಚ್ ಆಗಿ ಚುಕ್ಕಾಣಿ ಹಿಡಿದಿದ್ದರು.
ಇದನ್ನೂ ಓದಿ: ಬೌಲರ್ ಉಮೇಶ್ ಯಾದವ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಹೀಗಿದೆ ಅವರ ಕ್ರಿಕೆಟ್ ಜರ್ನಿ!