ಪಾಕ್ ಮತ್ತು ಇಂಗ್ಲೆಂಡ್ ನಡುವೆ ಏಳು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಮೊದಲ ಮೂರು ಪಂದ್ಯಗಳಲ್ಲಿ ಎರಡು ಗೆಲುವಿನೊಂದಿಗೆ ಇಂಗ್ಲೆಂಡ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತ್ತು. ಈಗ ಪಾಕಿಸ್ತಾನ್ ತಂಡ ಇಂಗ್ಲೆಂಡ್ ವಿರುದ್ಧ ಗೆಲುವು ದಾಖಲಿಸಿ ಸರಣಿ ಸಮಬಲ(2-2)ದಲ್ಲಿ ಮುಂದೆ ಸಾಗಿದೆ. ಮೊದಲ ಮತ್ತು ಮೂರನೇ ಟಿ20 ಪಂದ್ಯವನ್ನು ಇಂಗ್ಲೆಂಡ್ ಗೆದ್ದಿದ್ದರೆ, ಎರಡನೇ ಟಿ20 ಪಂದ್ಯ ಮತ್ತು ನಾಲ್ಕನೇ ಟಿ20 ಪಂದ್ಯ ಪಾಕಿಸ್ತಾನ ಗೆದ್ದುಕೊಂಡಿದೆ. ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟಿ20 ಪಂದ್ಯ ಆಡಿದ ಪಾಕಿಸ್ತಾನ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಟಿ20ಯಲ್ಲಿ ಭರ್ಜರಿ ಸಾಧನೆ ಮಾಡಿದೆ.
ಪಾಕಿಸ್ತಾನ ತಂಡ 200 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಂದರ್ಭದಲ್ಲಿ ಒಟ್ಟು 182 ಪಂದ್ಯಗಳನ್ನು ಆಡಿರುವ ಭಾರತ ತಂಡ ಎರಡನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ತಂಡ 171 ಪಂದ್ಯಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಶ್ರೀಲಂಕಾ 165 ಪಂದ್ಯಗಳೊಂದಿಗೆ ಐದನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ತಂಡ ಇದುವರೆಗೆ ಒಟ್ಟು 158 ಟಿ20 ಪಂದ್ಯಗಳನ್ನು ಆಡಿದ್ದು, ಆರನೇ ಸ್ಥಾನದಲ್ಲಿದೆ.
17 ವರ್ಷಗಳ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸಕ್ಕೆ ಆಗಮಿಸಿದೆ. ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನ ಪ್ರವಾಸ ಮಾಡದಿರಲು ಇಂಗ್ಲೆಂಡ್ ನಿರ್ಧರಿಸಿತ್ತು. ಇಂಗ್ಲೆಂಡ್ ಕೊನೆಯದಾಗಿ 2005ರಲ್ಲಿ ಪಾಕಿಸ್ತಾನದಲ್ಲಿ ಆಡಿತ್ತು. ಕಳೆದ ವರ್ಷವೇ ಇಂಗ್ಲೆಂಡ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದ್ರೆ ಭದ್ರತಾ ಕಾರಣಗಳಿಂದ ನ್ಯೂಜಿಲೆಂಡ್ ಪ್ರವಾಸವನ್ನು ರದ್ದುಗೊಳಿಸಿರುವುದನ್ನು ನೋಡಿದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಹಿಂದೆ ಸರಿದಿತ್ತು.
ಇಂಗ್ಲೆಂಡ್ ವಿರುದ್ಧ ಪಾಕ್ಗೆ ರೋಚಕ ಗೆಲುವು: ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ 7 ಟಿ20 ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯ ಭಾನುವಾರ ಸಂಜೆ (ಸೆಪ್ಟೆಂಬರ್ 25) ಕರಾಚಿಯಲ್ಲಿ ನಡೆಯಿತು. ಇಂಗ್ಲೆಂಡ್ ತಂಡವನ್ನು 3 ರನ್‌ಗಳಿಂದ ಸೋಲಿಸಿದ ಪಾಕಿಸ್ತಾನ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ.
ಕರಾಚಿಯಲ್ಲಿ ನಡೆದ ರೋಮಾಂಚಕ ನಾಲ್ಕನೇ T20I ಪಂದ್ಯದಲ್ಲಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ಅನ್ನು ಸೋಲಿಸಿ ಸರಣಿಯನ್ನು 2-2 ರಿಂದ ಸಮಬಲಗೊಳಿಸಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿ ಪಾಕ್ ತಂಡ ನಿಗದಿತ 20 ಓವರ್ಗಳಿಗೆ ನಾಲ್ಕು ವಿಕೆಟ್ಗಳ ನಷ್ಟಕ್ಕೆ 166 ರನ್ಗಳನ್ನು ಗಳಿಸಿತ್ತು. ಪಾಕ್ ಪರ ರಿಜ್ವಾನ್ 88 ರನ್, ನಾಯಕ ಬಾಬರ್ ಅಜಮ್ 36 ರನ್ ಮತ್ತು ಮಸೂದ್ 21 ರನ್ಗಳಿಸಿ ಎದುರಾಳಿಗೆ ಸ್ಪರ್ಧಾತ್ಮಕ ಗುರಿಯನ್ನು ನೀಡಿದ್ದರು. ಪಾಕ್ ನೀಡಿದ ಮೊತ್ತವನ್ನು ಬೆನ್ನತ್ತಿದ್ದ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಎದುರಿಸಿತು. 2 ಓವರ್ನಲ್ಲಿ 14 ರನ್ಗಳನ್ನು ಗಳಿಸಿದ ಇಂಗ್ಲೆಂಡ್ ತಂಡ ತನ್ನ ಮೂವರು ಆರಂಭಿಕ ಬ್ಯಾಟರ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಬಂದ ಬ್ಯಾಟರ್ಗಳು ಸಹ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದೇ ಪೆವಿಲಿಯನ್ ಹಾದಿ ಹಿಡಿದರು.
ಆಟಗಾರ ಲಿಯಾಮ್ ಡಾಸನ್ ಇಂಗ್ಲೆಂಡ್ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಆದ್ರೆ ಗೆಲುವಿನ ಹಾದಿಯಲ್ಲಿದ್ದ ಇಂಗ್ಲೆಂಡ್ ತಂಡ ಎಡವಿತು. ಲಿಯಾಮ್ ಡಾಸನ್ ತಂಡದ ಗೆಲುವಿಗೆ ಇನ್ನೂ ಐದು ರನ್ಗಳು ಬೇಕಾಗಿದ್ದ ವೇಳೆ ಹ್ಯಾರೀಸ್ ರೌಫ್ಗೆ ವಿಕೆಟ್ ಒಪ್ಪಿಸಿ ಔಟಾದರು. ಇದರ ಬೆನ್ನಲ್ಲೇ ಸ್ಟೋನ್ ಮತ್ತು ರೀಸ್ ಟೋಪ್ಲಿ ವಿಕೆಟ್ವೊಪ್ಪಿಸಿ ಹೊರ ನಡೆದರು. ಇಂಗ್ಲೆಂಡ್ ತಂಡ 19.2 ಓವರ್ಗಳಲ್ಲಿ ತನ್ನ ಎಲ್ಲ ವಿಕೆಟ್ಗಳನ್ನು ಕಳೆದುಕೊಂಡು 163 ಕಲೆ ಹಾಕುವ ಮೂಲಕ ಮೂರು ರನ್ಗಳ ಸೋಲು ಕಂಡಿತು. ಪಾಕ್ ಪರ ಮೊಹಮ್ಮದ್ ನವಾಜ್ ಮತ್ತು ಹ್ಯಾರಿಸ್ ರೌಫ್ ತಲಾ ಮೂರು ವಿಕೆಟ್ಗಳನ್ನು ಪಡೆದ್ರೆ, ಮೊಹಮ್ಮದ್ ಹಸನೈನ್ 2 ವಿಕೆಟ್ ಮತ್ತು ಮೊಹಮ್ಮದ್ ವಸೀಮ್ ಜೂ. 1 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.