ಕರಾಚಿ (ಪಾಕಿಸ್ತಾನ): ಏಷ್ಯಾ ಕಪ್‌ಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕರೆಸಿಕೊಳ್ಳಲಾಗದ ಕಾರಣ ಅಲ್ಲಿನ ಕ್ರಿಕೆಟ್ ಮಂಡಳಿ ಚೌಕಾಸಿ ಮಾಡುವ ಕೆಲಸಕ್ಕೆ ಇಳಿದಿದೆ. ಪಾಕಿಸ್ತಾನದಲ್ಲಿ ನಡೆಯುವ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಲಿಖಿತವಾಗಿ ಖಾತರಿ ಮಾಡಿದರೆ ಮಾತ್ರ, ಪಾಕ್ ತಂಡವು ಭಾರತದಲ್ಲಿ ಅಕ್ಟೋಬರ್–ನವೆಂಬರ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ (ಪಿಸಿಬಿ) ಅಧ್ಯಕ್ಷ ನಜಾಂ ಸೇಥಿ ಹೇಳಿದ್ದಾರೆ.
ಇದೇ ವರ್ಷ ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ನಡೆಯಲಿದೆ. ಬಿಸಿಸಿಐ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ನಾಲ್ಕು ಮೈದಾನಗಳನ್ನು ಗುರುತುಮಾಡಿದೆ. ಅವೆಂದರೆ, ಭಾರತದ ಹೆಚ್ಚು ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಅಕಾಶ ಇರುವ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಡಾಂಗಣಕ್ಕೆ ಮೊದಲ ಪ್ರಾಶಸ್ತ್ಯ ನೀಡಿದೆ. ನಂತರ ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾವನ್ನು ಬಿಸಿಸಿಐ ಗುರುತಿಸಿದೆ.
ವಿಶ್ವಕಪ್ಗೂ ಮುನ್ನ ನಡೆಯಲಿರುವ ಏಷ್ಯಾ ಕಪ್‌ಗೆ ಭಾರತ ಪಾಕಿಸ್ತಾನ ಪ್ರವಾಸ ಮಾಡುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ಹೊಂದಿದೆ. ಹೀಗಿರುವ ಕಾರಣ ಪಿಸಿಬಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಂದೆ 'ಹೈಬ್ರಿಡ್ ಮಾದರಿ'ಯ ಪಂದ್ಯಕ್ಕೆ ಮನವಿಯನ್ನಂತೂ ಇಟ್ಟಿದೆ. ಆದರೆ ಏಷ್ಯಾ ಕಪ್‌ಗೆ ಸಂಬಂಧಿಸಿದಂತೆ ಪಾಕಿಸ್ತಾನ ಮುಂದಿಟ್ಟಿರುವ ಪ್ರಸ್ತಾಪಕ್ಕೆ ಎಸಿಸಿ ಅಧ್ಯಕ್ಷ ಜಯ್ ಶಾ ಅಂತಿಮ ನಿಲುವು ಸ್ಪಷ್ಟಪಡಿಸಿಲ್ಲ. ಈ ಮಾದರಿಯಂತೆ ಭಾರತ ತನ್ನ ಪಂದ್ಯಗಳನ್ನು ಯುಎಇಯಲ್ಲಿ ಮತ್ತು ಪಾಕಿಸ್ತಾನ ತನ್ನ ಪಂದ್ಯಗಳನ್ನು ಸ್ವದೇಶದಲ್ಲಿ ಆಡಲಿದೆ.
ವಿಶ್ವಾಸಾರ್ಹ ಮೂಲಗಳ ಮಾಹಿತಿ ಪ್ರಕಾರ, ಸೇಥಿ ಸೋಮವಾರ (ಮೇ 8) ದುಬೈಗೆ ತೆರಳಲಿದ್ದು, ಎಸಿಸಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವುದಾಗಿ ಬಿಸಿಸಿಐ ಮುಖ್ಯಸ್ಥ ಜಯ್ ಶಾ ಅವರು ಲಿಖಿತವಾಗಿ ಒಪ್ಪಿಗೆ ನೀಡಿದರೆ, ಪಾಕಿಸ್ತಾನ ತಂಡ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತದೆ. ಇಲ್ಲವಾದಲ್ಲಿ ವಿಶ್ವಕಪ್ಗೂ ಹೈಬ್ರಿಡ್ ಮಾದರಿಯ ಬಗ್ಗೆ ಪ್ರಸ್ತಾಪಿಸಲು ಸೇಥಿ ಮುಂದಾಗುವ ನಿರೀಕ್ಷೆಯಿದೆ ಎಂದು ಪಿಸಿಬಿಯ ಮೂಲವೊಂದು ತಿಳಿಸಿದೆ.
ಹೈಬ್ರಿಡ್ ಮಾದರಿ ಏಷ್ಯಾ ಕಪ್ 2023ರನ್ನು, ಅಂದರೆ ಲಾಹೋರ್ ಮತ್ತು ದುಬೈನಲ್ಲಿ ನಡೆಸುವ ಸಂಬಂಧ ಪಿಸಿಬಿ ಸಲ್ಲಿಸಿರುವ ಮನವಿಗೆ ಎಸಿಸಿ ಒಪ್ಪದೇ ಇದ್ದಲ್ಲಿ ಪಾಕಿಸ್ತಾನ ಏಷ್ಯಾ ಕಪ್‌ನಲ್ಲಿ ಆಡಬೇಕೆ ಬೇಡವೇ ಎಂಬ ಬಗ್ಗೆಯೂ ಸೇಥಿ ಸರ್ಕಾರಿ ಅಧಿಕಾರಿಗಳ ಸಲಹೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್ ಆತಿಥ್ಯಕ್ಕೆ ಸಂಬಂಧಿಸಿದಂತೆ ಎಸಿಸಿ ಸದಸ್ಯ ರಾಷ್ಟ್ರಗಳಿಗೆ ಕಠಿಣ ಮತ್ತು ದೃಢವಾದ ನಿಲುವು ರವಾನಿಸಲು ಸೇಥಿ ಅವರಿಗೆ ಸರ್ಕಾರದ ಕಡೆಯಿಂದ ಸಲಹೆ ನೀಡಲಾಗಿದೆ ಎನ್ನಲಾಗ್ತಿದೆ.
ಪಾಕಿಸ್ತಾನ ಮಂಡಿಸಿರುವ ಹೈಬ್ರಿಡ್ ಮಾದರಿ ಒಪ್ಪಬೇಕು, ಪಾಕ್‌ನಿಂದ ಏಷ್ಯಾಕಪ್ ಆತಿಥ್ಯ ಕಿತ್ತುಕೊಂಡಲ್ಲಿ ಪಿಸಿಬಿಯು ಈ ವರ್ಷ ಬೇರೆ ಟೂರ್ನಿಗಳಲ್ಲಿ ಭಾಗವಹಿಸುವುದಿಲ್ಲ ಎಂದು ಎಸಿಸಿ ಸದಸ್ಯರಿಗೆ ಸೇಥಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳುವ ನಿರೀಕ್ಷೆಯಿದೆ.
ಇದನ್ನೂ ಓದಿ: ಫಿಲಿಫ್ ಸಾಲ್ಟ್ ವಿರುದ್ಧ ಕೋಪ ಹೊರಹಾಕಿದ ಸಿರಾಜ್.. ಪಂದ್ಯದ ನಂತರ ಆಲಂಗಿಸಿ ಶಹಬ್ಬಾಶ್ ಗಿರಿ