ಕ್ವೀನ್ಸ್ಟೌನ್, ನ್ಯೂಜಿಲ್ಯಾಂಡ್ : ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಮಂಗಳವಾರ ನಡೆದ 2ನೇ ಮಹಿಳಾ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮೂರು ವಿಕೆಟ್‌ಗಳ ಸೋಲು ಅನುಭವಿಸಿದೆ.
ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 270 ರನ್ ಗಳಿಸಿತು. ನಾಯಕಿ ಮಿಥಾಲಿ ರಾಜ್ ಔಟಾಗದೆ ಅವರು 66 ರನ್, ವಿಕೆಟ್ ಕೀಪರ್ ರಿಚಾ ಘೋಷ್ ಅವರ 65 ರನ್, ಎಸ್ ಮೇಘನಾ ಅವರು 49 ರನ್, ಯಶಿಕಾ ಭಾಟಿಯಾ 31, ಶೆಫಾಲಿ ವರ್ಮಾ 24 ರನ್ಗಳ ಕೊಡುಗೆಯನ್ನು ತಂಡಕ್ಕೆ ನೀಡಿದ್ದರು.
ಟೀಂ ಇಂಡಿಯಾದ 270 ರನ್ಗಳನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡದ ಪರವಾಗಿ ಅಮೆಲಿಯಾ ಕೆರ್ ಅಜೇಯ 119 ರನ್ ಗಳಿಸಿ ತಂಡ ಗೆಲ್ಲಲು ಕಾರಣರಾದರು. ಇದರ ಜೊತೆಗೆ ಮ್ಯಾಡಿ ಗ್ರೀನ್ 52, ಕೆಟೆ ಮಾರ್ಟಿನ್ 20, ಸೋಫಿ ಡಿವೈನ್ 33 ರನ್ ಗಳಿಸಿದರು. ಈ ಮೂಲಕ 7 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿ ನ್ಯೂಜಿಲ್ಯಾಂಡ್ ತಂಡ ಗೆಲುವು ತನ್ನದಾಗಿಸಿಕೊಂಡಿತು.
ಬೌಲಿಂಗ್ ವಿಚಾರಕ್ಕೆ ಬರುವುದಾದರೆ, ಭಾರತದ ಪರ ದೀಪ್ತಿ ಶರ್ಮ 52 ರನ್ ನೀಡಿ 4 ವಿಕೆಟ್ ಪಡೆದರೆ, ಪೂನಂ ಯಾದವ್, ಹರ್ಮನ್ ಪ್ರೀತ್ ಕೌರ್ ಮತ್ತು ರಾಜೇಶ್ವರಿ ಗಾಯಕ್ವಾಡ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ವಿಂಡೀಸ್ ಟಿ-20 ಸರಣಿಯಿಂದ ಕೆ.ಎಲ್.ರಾಹುಲ್ ಔಟ್: ಉಪನಾಯಕನಾಗಿ ರಿಷಬ್ ಪಂತ್ಗೆ ಬಡ್ತಿ
ನ್ಯೂಜಿಲ್ಯಾಂಡ್ ಪರ ಸೋಫಿ ಡಿವೈನ್ 2 ವಿಕೆಟ್ ಪಡೆದರೆ, ಜೆಸ್ ಕೆರ್, ರೋಸ್ಮೆರಿ ಮೈರ್, ಫ್ರಾನ್ ಜೋನಾಸ್, ಅಮೆಲಿಯಾ ಕೌರ್ ತಲಾ ಒಂದು ವಿಕೆಟ್ ಪಡೆದರು. ಇನ್ನು ಐದು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಇದಾಗಿದ್ದು, ಮೊದಲನೇ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ನ್ಯೂಜಿಲ್ಯಾಂಡ್ ತಂಡ, ಎರಡನೇ ಪಂದ್ಯದಲ್ಲೂ ಗೆಲುವು ಸಾಧಿಸಿದೆ. ಈ ಮೂಲಕ 2-0 ಅಂತರದಲ್ಲಿ ಮುನ್ನಡೆಯುತ್ತಿದೆ.