ಬೆಂಗಳೂರು : ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ ಎಂಟು ವಿಕೆಟ್‌ಗಳ ಜಯ ಸಾಧಿಸಿದ ಮೈಸೂರು ವಾರಿಯರ್ಸ್ ತಂಡ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಜಗದೀಶ ಸುಚಿತ್ (28ಕ್ಕೆ 3 ವಿಕೆಟ್) ಹಾಗೂ ರವಿಕುಮಾರ್ ಸಮರ್ಥ್ (62*) ಅಜೇಯ ಅರ್ಧಶತಕದ ಬಲದಿಂದ ಮೈಸೂರು ತಂಡ 154 ರನ್‌ಗಳ ಗುರಿಯನ್ನು ಎರಡು ಓವರ್‌ಗಳು ಬಾಕಿ ಇರುವಂತೆಯೇ ತಲುಪಿ, ಗೆಲುವಿನ ನಗೆ ಬೀರಿತು.
ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಮೈಸೂರು ವಾರಿಯರ್ಸ್ ನಾಯಕ ಕರುಣ್ ನಾಯರ್ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಮೈಸೂರು ಪರ ದಾಳಿಗಿಳಿದ ಅನುಭವಿ ಸ್ಪಿನ್ನರ್ ಜಗದೀಶ ಸುಚಿತ್ ಮಿಸ್ಟಿಕ್ಸ್ ಆರಂಭಿಕರಾದ ಆದರ್ಶ್ ಪ್ರಜ್ವಲ್ (11) ಮತ್ತು ಎಲ್.ಆರ್.ಚೇತನ್ (34) ವಿಕೆಟ್ ಪಡೆದರು. ಆರ್.ಸ್ಮರನ್ (3) ಏಳನೇ ಓವರ್‌ನಲ್ಲಿ ಕುಶಾಲ್ ವಾಧ್ವಾನಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.
ಬಳಿಕ ಮತ್ತೊಮ್ಮೆ ದಾಳಿಗಿಳಿದ ಜಗದೀಶ್ ಸುಚಿತ್, 18 ಎಸೆತಗಳಲ್ಲಿ 25 ರನ್ ಗಳಿಸಿದ್ದ ಮ್ಯಾಕ್ನೈಲ್ ನೊರೊನ್ಹಾರನ್ನ ಔಟ್ ಮಾಡಿದರು. ಕೊಂಚ ಭರವಸೆ ಮೂಡಿಸಿದ್ದ ಅಮಿತ್ ವರ್ಮಾ (9) ಮತ್ತು ಕೆವಿ ಅನೀಶ್ (19) ಕ್ರಮವಾಗಿ 15 ಮತ್ತು 16ನೇ ಓವರ್‌ಗಳಲ್ಲಿ ವಿಕೆಟ್ ಕೈಚೆಲ್ಲಿದರು. ಶ್ರೀನಿವಾಸ್ ಶರತ್ (26) ಮತ್ತು ಡಿ ಅವಿನಾಶ್ (19*) ಏಳನೇ ವಿಕೆಟ್‌ಗೆ 45 ರನ್ ಸೇರಿಸುವ ಮೂಲಕ ಗುಲ್ಬರ್ಗಾ ಮಿಸ್ಟಿಕ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು. ಮೈಸೂರು ಪರ ಜಗದೀಶ್ ಸುಚಿತ್ (28/3) ಹಾಗೂ ಕುಶಾಲ್ ವಾಧ್ವಾನಿ (17/2) ಮಿಂಚಿನ ಬೌಲಿಂಗ್ ನಡೆಸಿದರು.
154 ರನ್‌ಗಳ ಗುರಿ ಬೆನ್ನತ್ತಿದ ಮೈಸೂರಿನ ಆರಂಭಿಕ ಎಸ್.ಯು ಕಾರ್ತಿಕ್ 20 ರನ್ ಗಳಿಸಿದ್ದಾಗ ಮೂರನೇ ಓವರ್ ಎಸೆದ ಹಾರ್ದಿಕ್ ರಾಜ್ಗೆ ವಿಕೆಟ್ ಒಪ್ಪಿಸಿದರು. ಆದರೂ ಸಹ ವಾರಿಯರ್ಸ್ ಪವರ್‌ಪ್ಲೇ ಅಂತ್ಯದೊಳಗೆ 43 ರನ್‌ಗಳನ್ನು ಕಲೆಹಾಕಿತು. ನಂತರ ಬಂದ ನಾಯಕ ಕರುಣ್ ನಾಯರ್ 23 ರನ್ ಕೊಡುಗೆ ನೀಡಿ ಔಟ್ ಆದರು. ಆದರೆ ಮತ್ತೋರ್ವ ಆರಂಭಿಕ ರವಿಕುಮಾರ್ ಸಮರ್ಥ್ 50 ಎಸೆತಗಳಲ್ಲಿ 62* ರನ್ ಗಳಿಸುವ ಮೂಲಕ ಮೈಸೂರಿನ ಕೈ ಹಿಡಿದರು. ಮೂರನೇ ವಿಕೆಟ್‌ಗೆ ಸಮರ್ಥ್ ಜೊತೆಯಾದ ಕೆ.ಎಸ್ ಲಂಕೇಶ್ 21 ಎಸೆತಗಳಲ್ಲಿ 39* ರನ್ ಸಿಡಿಸಿ ಇನ್ನೂ ಎರಡು ಓವರ್‌ಗಳು ಬಾಕಿ ಇರುವಂತೆಯೇ ಮೈಸೂರಿಗೆ ಜಯ ದಕ್ಕಿಸಿಕೊಟ್ಟರು.
ಸಂಕ್ಷಿಪ್ತ ಸ್ಕೋರ್: ಗುಲ್ಬರ್ಗಾ ಮಿಸ್ಟಿಕ್ಸ್ - 153-7 (20); ಎಲ್.ಆರ್ ಚೇತನ್ - 34 ರನ್ (17 ಎಸೆತ), ಶ್ರೀನಿವಾಸ್ ಶರತ್ - 26 (19), ಜಗದೀಶ ಸುಚಿತ್ - 28/3 (4), ಕುಶಾಲ್ ವಾಧ್ವಾನಿ - 17/2-(4)
ಮೈಸೂರು ವಾರಿಯರ್ಸ್ - 154-2 (18); ರವಿಕುಮಾರ್ ಸಮರ್ಥ್ - 62*(50), ಕೆ.ಎಸ್ ಲಂಕೇಶ್ - 39*(21)
ಹಾರ್ದಿಕ್ ರಾಜ್ - 30/2 (4); ಪಂದ್ಯ ಶ್ರೇಷ್ಠ - ರವಿಕುಮಾರ್ ಸಮರ್ಥ್
ಇದನ್ನೂ ಓದಿ: Maharaja Trophy: ಮಂಗಳೂರು ವಿರುದ್ಧ ಹುಬ್ಬಳ್ಳಿಗೆ 5 ವಿಕೆಟ್‌ಗಳ ಗೆಲುವು.. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡ ಟೈಗರ್ಸ್