ಮುಂಬೈ: ಕೇರಳದ ಉದಯೋನ್ಮುಖ ಪ್ರತಿಭೆ ಮೊಹಮ್ಮದ್ ಅಜರುದ್ದೀನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯಬೇಕು, ವಿರಾಟ್ ಕೊಹ್ಲಿ ತಮ್ಮ 3ನೇ ಕ್ರಮಾಂಕಕ್ಕೆ ಮರಳಿದರೆ ತಂಡ ಸಮತೋಲನದಲ್ಲಿರುತ್ತದೆ. ಜೊತೆಗೆ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 34 ರನ್ಗಳ ಸೋಲು ಕಂಡ ನಂತರ ವಿರೇಂದ್ರ ಸೆಹ್ವಾಗ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ತಂಡದಲ್ಲಿ ರಜತ್ ಪಾಟಿದಾರ್ ಸ್ಥಾನ ಮತ್ತು ಮ್ಯಾಕ್ಸ್ವೆಲ್ ಹಾಗೂ ವಿಲಿಯರ್ಸ್ ಅವರ ಬ್ಯಾಟಿಂಗ್ ಕ್ರಮಾಂಕ ಪ್ರಶ್ನಿಸಿದ್ದಾರೆ.
"ನನ್ನ ಪ್ರಕಾರ ವಿರಾಟ್ ತಮ್ಮ ಮೂಲ ಬ್ಯಾಟಿಂಗ್ ಕ್ರಮಾಂಕವಾದ 3ಕ್ಕೆ ಮರಳಿ ಮತ್ತು ಮೊಹಮ್ಮದ್ ಅಜರುದ್ದೀನ್ಗೆ ಆರಂಭಿಕ ಜವಾಬ್ದಾರಿ ನೀಡಬೇಕು. ಪ್ರಸ್ತುತ ಪಾಟಿದಾರ್ಗಿಂತಲೂ ಆರ್ಸಿಬಿಯಲ್ಲಿ ಅಜರುದ್ದೀನ್ ಅತ್ಯುತ್ತಮ ಆಯ್ಕೆ. ಕೊಹ್ಲಿ ಮೂರರಲ್ಲಿ, ಮ್ಯಾಕ್ಸಿ ಮತ್ತು ಎಬಿಡಿ ನಂತರದ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕು" ಎಂದು ಕ್ರಿಕ್ಬಜ್ ಸಂವಾದದ ವೇಳೆ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಇದರಿಂದ ನಿಮಗೆ ಮೂವರು ವಿಶ್ವದರ್ಜೆಯ ಆಟಗಾರರು ಮಧ್ಯಮ ಕ್ರಮಾಂಕದಲ್ಲಿ ಸಿಗಲಿದ್ದಾರೆ. ಒಂದು ವೇಳೆ ದೇವದತ್ ಪಡಿಕ್ಕಲ್ ಮತ್ತು ಅಜರುದ್ದೀನ್ ಆರಂಭಿಕರಾಗಿ ವಿಫಲರಾದರೆ ಈ ಮೂವರು ಸಮಸ್ಯೆಯಿಂದ ಹೊರತರಲು ಸಮರ್ಥರಾಗಲಿದ್ದಾರೆ ಎಂದು ಅವರು ಸಲಹೆ ನೀಡಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಆರ್ಸಿಬಿಯ ಯಾವೊಬ್ಬ ಬ್ಯಾಟ್ಸ್ಮನ್ ಆಕ್ರಮಣಕಾರಿತಾಗಿ ಕಾಣಿಸಲಿಲ್ಲ, ವಿರಾಟ್ 34 ಎಸೆತಕ್ಕೆ 35, ಪಾಟಿದಾರ್ 30 ಎಸೆತಗಳಿಗೆ 31 ರನ್ಗಳಿಸಿದರೆ, ಪಡಿಕ್ಕಲ್ 7, ಮ್ಯಾಕ್ಸ್ವೆಲ್ 0 ಹಾಗೂ ವಿಲಿಯರ್ಸ್ 3 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಬೌಲರ್ ಹರ್ಷಲ್ ಪಟೇಲ್ 13 ಎಸೆತಗಳಲ್ಲಿ 31 ರನ್ಗಳಿಸಿದರಾದರೂ ಅಷ್ಟರಲ್ಲಿ ಆರ್ಸಿಗೆ ಸೋಲು ಖಚಿತವಾಗಿತ್ತು.
ಇದನ್ನು ಓದಿ:ಪಂಜಾಬ್ ಕಿಂಗ್ಸ್ ವಿರುದ್ಧ ಸೋಲಿಗೆ ಈ ಸಂಗತಿಗಳು ಕಾರಣವಾಯ್ತು ಎಂದ ವಿರಾಟ್ ಕೊಹ್ಲಿ