ಮುಂಬೈ: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಇದೇ ತಿಂಗಳು ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಮೊದಲಿನ ವೇಳಾಪಟ್ಟಿಯಂತೆ ಟೆಸ್ಟ್ ಸರಣಿಯ ನಂತರ ಟಿ-20 ಸರಣಿ ನಡೆಯಬೇಕಾಗಿತ್ತು. ಆದರೆ, ಪ್ರಸ್ತುತ ವೇಳಾಪಟ್ಟಿ ಉಲ್ಟಾ ಆಗಿದ್ದು, ಮೊದಲು ಟಿ-20 ಮತ್ತು ನಂತರ ಟೆಸ್ಟ್ ಸರಣಿ ನಡೆಯಲಿದೆ. ಹಾಗಾಗಿ ಮೊದಲ ಟೆಸ್ಟ್ ಬದಲಾಗಿ ಕೊನೆಯ ಡೇ ಅಂಡರ್ ನೈಟ್ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಲಖನೌದಲ್ಲಿ ಮೊದಲ ಫೆಬ್ರವರಿ 24ರಲ್ಲಿ ಟಿ-20 ಪಂದ್ಯದ ಮೂಲಕ ಪ್ರವಾಸ ಆರಂಭವಾಗಲಿದೆ. ಉತ್ತರಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಆತಿಥ್ಯವಹಿಸಲಿದೆ. ನಂತರ ಫೆಬ್ರವರಿ 26 ಮತ್ತು 27 ರಂದು ಧರ್ಮಶಾಲದಲ್ಲಿ ಎರಡು ಟಿ-20 ಪಂದ್ಯಗಳು ನಡೆಯಲಿವೆ. HPCA ಮತ್ತು UPCA ಮಂಡಳಿಗಳು ವೇಳಾಪಟ್ಟಿಯನ್ನು ಖಚಿತಪಡಿಸಿವೆ.
ಇನ್ನು ಧರ್ಮಶಾಲಾದಿಂದ ತಂಡಗಳು ನೇರವಾಗಿ ಮೊಹಾಲಿಗೆ ತೆರಳಲಿದ್ದು, ಮಾರ್ಚ್ 3-7ರವರೆಗೆ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿವೆ. ಬಿಸಿಸಿಐ ಕೊನೆಯ ಕ್ಷಣದಲ್ಲಿ ಏನಾದರೂ ಟ್ವಿಸ್ಟ್ ಮಾಡದಿದ್ದರೆ ಇದು ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯವಾಗಲಿದೆ. ನಂತರ ಬೆಂಗಳೂರಿನಲ್ಲಿ ಮಾರ್ಚ್ 12ರಿಂದ 16ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 2ನೇ ಟೆಸ್ಟ್ ಪಂದ್ಯ ನಡೆಯಲಿದೆ. ಇದು ಡೇ ಅಂಡ್ ನೈಟ್ ಟೆಸ್ಟ್ ಪಂದ್ಯವಾಗಿದೆ. ಆದರೆ, ಇದರ ಬಗ್ಗೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಅಥವಾ ಬಿಸಿಸಿಐ ಇನ್ನೂ ಖಚಿತ ಪಡಿಸಿಲ್ಲ.
ಡೇ ಅಂಡ್ ನೈಟ್ ಟೆಸ್ಟ್ ಎನ್ನುವುದರ ಬಗ್ಗೆ ನಮಗೆ ಮಾಹಿತಿಯಿಲ್ಲ, ಮಾರ್ಚ್ 12ರಿಂದ 16ರವರೆಗೆ ಪಂದ್ಯ ನಡೆಯಲಿದೆ ಎಂದಷ್ಟೇ ನಮಗೆ ತಿಳಿಸಲಾಗಿದೆ ಎಂದು ಕೆಎಸ್ಸಿಎ ತಿಳಿಸಿದೆ, ರಾಜ್ಯ ಅಸೋಸಿಯೇಷನ್ ಬಿಸಿಸಿಐನಿಂದ ಅಧಿಕೃತ ಸೂಚನೆಗಾಗಿ ಕಾಯುತ್ತಿರುವುದಾಗಿ ಮಾಹಿತಿ ನೀಡಿದೆ.
ಇದನ್ನೂ ಓದಿ:ರೋಹಿತ್ ಅಥವಾ ಬೇರೆಯವರ ನಾಯಕತ್ವದಲ್ಲೂ ಕೊಹ್ಲಿ ರನ್ ಮಳೆ ಸುರಿಸುತ್ತಾರೆ: ಗವಾಸ್ಕರ್ ವಿಶ್ವಾಸ