ಕಟಕ್(ಒಡಿಶಾ): ತಂಡದಲ್ಲಿ ಸ್ಥಾನ ಸಿಗದೇ ನೊಂದ ಮಹಿಳಾ ಕ್ರಿಕೆಟರ್ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಒಡಿಶಾದ ಕಟಕ್ನಲ್ಲಿ ನಡೆದಿದೆ. 26 ವರ್ಷದ ರಾಜಶ್ರೀ ಸ್ವೈನ್ ಜೀವ ಕಳೆದುಕೊಂಡ ಕ್ರೀಡಾಪಟು. ಇಲ್ಲಿನ ದಟ್ಟಾರಣ್ಯದಲ್ಲಿ ಶವ ಪತ್ತೆಯಾಗಿದೆ. ಇದೊಂದು ಅಸ್ವಾಭಾವಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರಣ್ಯದ ಬಳಿಕ ಬಿಟ್ಟುಹೋಗಿದ್ದ ರಾಜಶ್ರೀ ಅವರ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.
4 ದಿನಗಳ ಹಿಂದೆ ಅಂದರೆ ಜನವರಿ 11 ರಂದು ಕ್ರಿಕೆಟರ್ ರಾಜಶ್ರೀ ಸ್ವೈನ್ ಅವರು ನಾಪತ್ತೆಯಾಗಿದ್ದರು. ಪುದುಚೇರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಾಗಿ ಒಡಿಶಾ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಪುರಿ ಜಿಲ್ಲೆಯ ನಿವಾಸಿಯಾದ ರಾಜಶ್ರೀ ಅವರು ಇಲ್ಲಿಗೆ ಬಂದಿದ್ದರು. ಪಂದ್ಯಾವಳಿಗೆ ಆಯ್ಕೆಯಾದ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸ್ವೈನ್ ವಿಫಲರಾಗಿದ್ದರು. ಇದು ಅವರಲ್ಲಿ ತೀವ್ರ ಬೇಸರ ತಂದಿತ್ತು ಎಂದು ಗೊತ್ತಾಗಿದೆ.
ಬೇಸರಿಸಿಕೊಂಡಿದ್ದ ರಾಜಶ್ರೀ: ಬುಧವಾರ ತಂಡದ ಘೋಷಣೆಯಾಯಿತು. ರಾಜಶ್ರೀ ಸ್ಥಾನ ಪಡೆಯಲು ವಿಫಲವಾಗಿದ್ದರಿಂದ ಅಳುತ್ತಿದ್ದರು. ಕೆಲ ಹೊತ್ತಿನ ಬಳಿಕ ಅವರು ರೂಮಿನಿಂದ ಹೊರಹೋಗಿದ್ದರು. ನಾವು ತರಬೇತಿಗೆಂದು ಹೋಗಿದ್ದೇವು. ಆ ಸಮಯದಿಂದ ರಾಜಶ್ರೀ ನಾಪತ್ತೆಯಾಗಿಧ್ದರು. ಕರೆ ಮಾಡಿದರೂ ಸ್ವೀಕರಿಸದಿದ್ದರಿಂದ ನಾಪತ್ತೆ ದೂರು ದಾಖಲಿಸಲಾಯಿತು ಎಂದು ರಾಜಶ್ರೀ ಅವರ ಜೊತೆಗೆ ರೂಮಿನಲ್ಲಿ ಉಳಿದಿದ್ದ ಸಹ ಆಟಗಾರ್ತಿ ಮಾಹಿತಿ ನೀಡಿದರು.
ಕುಟುಂಬದಿಂದ ಕೊಲೆ ಆರೋಪ: ಬಲಗೈ ವೇಗದ ಬೌಲರ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದ ರಾಜಶ್ರೀ ಸ್ವೈನ್ ಅವರ ದೇಹದಲ್ಲಿ ಗಾಯದ ಗುರುತುಗಳಿವೆ. ಕಣ್ಣುಗಳು ಹಾನಿಗೊಳಗಾಗಿವೆ. ಕೊಲೆ ಮಾಡಲಾಗಿದೆ ಎಂದು ಆಕೆಯ ಕುಟುಂಬ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ. ಆಯ್ಕೆಯಾದ ಇತರರಿಗಿಂತ ಉತ್ತಮ ಪ್ರದರ್ಶನ ನೀಡಿದ್ದರೂ ರಾಜಶ್ರೀಗೆ ತಂಡದಲ್ಲಿ ಸ್ಥಾನ ನೀಡಿಲ್ಲ. ಇದು ನಿರಾಸೆಗೆ ಕಾರಣವಾಗಿದೆ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ: ಅನಾರೋಗ್ಯದ ಕಾರಣ ಬೆಂಗಳೂರಿಗೆ ಮರಳಿದ ದ್ರಾವಿಡ್: ಮೂರನೇ ಏಕ ದಿನಕ್ಕೆ ಕೋಚ್ ಯಾರು?
ಮಹಿಳಾ ಕ್ರಿಕೆಟರ್ ಕುಟುಂಬದ ಆರೋಪವನ್ನು ತಳ್ಳಿಹಾಕಿರುವ ಸಂಘದ ಸಿಇಒ ಸುಬ್ರತ್ ಬೆಹೆರಾ ರಾಜಶ್ರೀ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ತಂಡದ ಆಯ್ಕೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡಲಾಗಿದೆ. ಪೂರ್ವಾಗ್ರಹವಾಗಿದ್ದರೆ ಶಿಬಿರದಲ್ಲಿ ಭಾಗವಹಿಸಿದ 25 ಸದಸ್ಯರ ಸಂಭಾವ್ಯ ತಂಡದಲ್ಲಿ ರಾಜಶ್ರೀ ಅವರು ಸ್ಥಾನ ಪಡೆಯುತ್ತಿರಲಿಲ್ಲ ಎಂದು ಬೆಹೆರಾ ಹೇಳಿದರು.
ಜನವರಿ 11 ರಿಂದ ನಾಪತ್ತೆಯಾಗಿದ್ದ 26 ವರ್ಷದ ಮಹಿಳಾ ಕ್ರಿಕೆಟರ್ ರಾಜಶ್ರೀ ಸ್ವೈನ್ ಅವರ ಮೃತದೇಹ ಶುಕ್ರವಾರ ಇಲ್ಲಿ ನಿಗೂಢವಾಗಿ ದಟ್ಟ ಅರಣ್ಯದಲ್ಲಿ ಪತ್ತೆಯಾಗಿದೆ. ಅರಣ್ಯದ ಬಳಿ ಬಿಟ್ಟು ಹೋಗಿದ್ದ ಆಕೆಯ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. "ಈ ವಿಷಯದಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ.
ಅಥಗಢ ಪ್ರದೇಶದ ಗುರುಡಿಝಾಟಿಯಾ ಅರಣ್ಯದಲ್ಲಿ ನಾವು ಶವವನ್ನು ಕಂಡುಕೊಂಡಿದ್ದೇವೆ. ನಾವು ಸಾವಿನ ಬಗ್ಗೆ ಎಲ್ಲಾ ರೀತಿ ತನಿಖೆ ನಡೆಸುತ್ತೇವೆ" ಎಂದು ಉಪ ಪೊಲೀಸ್ ಆಯುಕ್ತ ಪಿನಾಕ್ ಮಿಶ್ರಾ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ರಾಜಶ್ರೀ ಅವರ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹಳೆಯ ಪಿಂಚಣಿ ಯೋಜನೆ ಜಾರಿಗೆ ಹಿಮಾಚಲ ಸರ್ಕಾರ ಒಪ್ಪಿಗೆ... ಮೊದಲ ಚುನಾವಣಾ ಭರವಸೆ ಈಡೇರಿಕೆ