ಹೈದರಾಬಾದ್ : ಸತತ ವೈಫಲ್ಯ ಅನುಭವಿಸುತ್ತಿರುವ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯಬೇಕಾ? ಹೀಗೊಂದು ಪ್ರಶ್ನೆ ಕ್ರಿಕೆಟ್ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ವಿರಾಟ್ ಕೊಹ್ಲಿ ಔಟಾದಾಗ ಬೇಸರಿಸಿಕೊಳ್ಳುವ ಬದಲು ಅಂಗಳದಲ್ಲಿ ಹೆಚ್ಚು ಶ್ರಮವಹಿಸಬೇಕು ಎಂದು ಸುನೀಲ್ ಗವಾಸ್ಕರ್ ಹೇಳಿದ್ದರೆ. ಇನ್ನು ಕೆಲವು ಹಿರಿಯ ಆಟಗಾರರು ವಿರಾಟ್ ಕೊಹ್ಲಿಗೆ ಸದ್ಯಕ್ಕೆ ಒಂದು ಬ್ರೇಕ್ ಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಮತ್ತು ಆಸ್ಟ್ರೇಲಿಯಾದ ಮಾಜಿ ಬೌಲರ್ ಬ್ರೆಟ್ ಲೀ ಕೂಡ ವಿರಾಟ್ ಸದ್ಯಕ್ಕೆ ಅಲ್ಪವಿರಾಮ ಪಡೆಯಬೇಕು. ಯಾವುದೇ ಲೆಜೆಂಡರಿ ಆಟಗಾರ ಕೆರಿಯರ್ ಪೂರ್ತಿ ಒಂದೇ ರೀತಿಯಲ್ಲಿ ಆಟವಾಡಲು ಸಾಧ್ಯವಿಲ್ಲ. ವಿರಾಟ್ ಕೂಡ ತಮ್ಮ ಆಟದಲ್ಲಿ ಗುಣಮಟ್ಟತೆ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ಸ್ವಲ್ಪ ಸಮಯ ಕುಟುಂಬದೊಂದಿಗೆ ಇದ್ದು, ವಿಶ್ರಾಂತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಅವರು ತಕ್ಕ ಪ್ರದರ್ಶನ ನೀಡಿಲ್ಲ. ಹೀಗಾಗಿ, ಅವರು ಮತ್ತೆ ಮೊದಲಿನಂತೆ ಮಿಂಚಲು ಅವರಿಗೆ ಕೆಲ ಸಮಯ ವಿಶ್ರಾಂತಿ ನೀಡಬೇಕಿದೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.
ವಿರಾಟ್ ಕೊಹ್ಲಿ ಒಬ್ಬ ಲೆಜೆಂಡರಿ ಆಟಗಾರ. ಆದರೆ, ಅವರು ಇದೀಗ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. 2- 3 ವರ್ಷಗಳ ಹಿಂದೆ ಕೊಹ್ಲಿ ಮೈದಾನಕ್ಕೆ ಇಳಿದರು ಎಂದರೆ ಶತಕ ಬಾರಿಸದೇ ವಾಪಸ್ ಬರುತ್ತಿರಲಿಲ್ಲ. ಅಂತಹ ಶ್ರೇಷ್ಠ ಮಟ್ಟದಲ್ಲಿ ಆಡುತ್ತಿದ್ದರು. ಯಾವುದೇ ಆಟಗಾರನೂ ಕೂಡ ತಮ್ಮ ವೃತ್ತಿಜೀವನದುದ್ದಕ್ಕೂ ಅದೇ ರೀತಿಯ ಪ್ರದರ್ಶನ ತೋರಲು ಅಸಾಧ್ಯ.
ಇದೀಗ ಕೊಹ್ಲಿ ಕೂಡ ಆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಈಗ ವಿಶ್ರಾಂತಿ ಬೇಕು. ಕೆಲವು ದಿನಗಳನ್ನು ಕುಟುಂಬದೊಂದಿಗೆ ಆರಾಮವಾಗಿ ಕಳೆಯಬೇಕು. ನಂತರ ಇಂಗ್ಲೆಂಡ್ ಟೂರ್ನಿಯಲ್ಲಿ ಆಡಲಿ ಎಂದು ಮೈಕಲ್ ವಾನ್ ಸಲಹೆ ನೀಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಕೂಡ ಕೊಹ್ಲಿಗೆ ಅಲ್ಪವಿರಾಮ ಪಡೆದುಕೊಳ್ಳಲು ಹೇಳಿದ್ದಾರೆ.
ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ರನ್ ಪೇರಿಸಿದರೆ ತಂಡಕ್ಕೆ ನೆರವಾಗುತ್ತದೆ. ಇಲ್ಲವಾದಲ್ಲಿ ತಂಡ ಸೋಲುತ್ತದೆ. ಇದಕ್ಕೆ ಆರ್ಸಿಬಿ ತಂಡ ಈ ಋತುವಿನ ಐಪಿಎಲ್ನಲ್ಲಿ ತೋರಿದ ಪ್ರದರ್ಶನವೇ ಸಾಕ್ಷಿ. ವಿರಾಟ್ ಶ್ರೇಷ್ಠ ಆಟಗಾರರಾಗಿದ್ದರೂ, ದುರದೃಷ್ಟವಶಾತ್ ಅವರು ಈ ಋತುವಿನಲ್ಲಿ ರನ್ ಗಳಿಸಲಾಗಿಲ್ಲ. ವಿಶ್ರಾಂತಿ ಪಡೆಯಲು ಮತ್ತು ಅವರ ಬ್ಯಾಟಿಂಗ್ ದೋಷಗಳನ್ನು ಸರಿಪಡಿಸಿಕೊಳ್ಳಲು ಒಳ್ಳೆಯ ಅವಕಾಶ ಎಂದು ಅಭಿಪ್ರಾಯಪಟ್ಟಿದ್ದಾರೆ.
ಓದಿ: ಚಾಂಪಿಯನ್ಸ್ ಲೀಗ್ ಫುಟ್ಬಾಲ್: ಲಿವರ್‌ಪೂಲ್ ವಿರುದ್ಧ ಗೆದ್ದು ಬೀಗಿದ ರಿಯಲ್ ಮ್ಯಾಡ್ರಿಡ್