ಅಬುಧಾಬಿ: ನಾಯಕ ರೋಹಿತ್ ಶರ್ಮಾ ಸೇರ್ಪಡೆಯೊಂದಿಗೆ ಮತ್ತಷ್ಟು ಬಲಿಷ್ಠವಾಗಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ಮಣಿಸಿರುವ ವಿಶ್ವಾಸದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯಲಿದೆ.
ಯುಎಇಯಲ್ಲಿ ಐಪಿಎಲ್ ಪುನಾರಂಭಗೊಂಡ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿತ್ತು. ಆದರೆ ನಾಯಕ ರೋಹಿತ್ ಶರ್ಮಾ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಗುರುವಾರದ ಪಂದ್ಯಕ್ಕೆ ರೋಹಿತ್ ಲಭ್ಯರಿದ್ದಾರೆ ಎಂದು ಕೋಚ್ ಜಯವರ್ದನೆ ಈಗಾಗಲೇ ತಿಳಿಸಿದ್ದಾರೆ.
ಮತ್ತೊಂದೆಡೆ, ಕೆಕೆಆರ್ ಬಲಿಷ್ಠ ಆರ್ಸಿಬಿ ವಿರುದ್ಧ 9 ವಿಕೆಟ್ಗಳ ಸುಲಭ ಜಯ ಸಾಧಿಸಿದ ಆತ್ಮ ವಿಶ್ವಾಸದಲ್ಲಿದೆ. ಬೌಲರ್ಗಳು ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಹಾಗಾಗಿ ಚಾಂಪಿಯನ್ ತಂಡದ ವಿರುದ್ಧ ಮೇಲುಗೈ ಸಾಧಿಸಲು ಎದುರು ನೋಡುತ್ತಿದ್ದಾರೆ.
ಮುಂಬೈ ಪ್ರಸ್ತುತ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಬಲಿಷ್ಠ ತಂಡವಾದರೂ ಸಿಎಸ್ಕೆ ವಿರುದ್ಧ ಕೇವಲ 157 ರನ್ಗಳ ಗುರಿ ಬೆನ್ನಟ್ಟಲಾಗದೇ ಸೋಲು ಕಂಡಿದ್ದು ತಂಡದ ವರ್ಚಸ್ಸಿಗೆ ಪೆಟ್ಟು ಬಿದ್ದಿದೆ. ಸೌರಭ್ ತಿವಾರಿ ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್ಮನ್ಗಳ ವೈಫಲ್ಯ ಅನುಭವಿಸಿದ್ದರು. ಇದೀಗ ಅತ್ಯುತ್ತಮ ಬೌಲಿಂಗ್ ಪಡೆಯಾಗಿರುವ ಕೆಕೆಆರ್ ವಿರುದ್ಧ ಜವಾಬ್ದಾರಿ ಬ್ಯಾಟಿಂಗ್ ನಡೆಸುವ ಅನಿವಾರ್ಯತೆಯಿದೆ.
ಇನ್ನು 8 ಪಂದ್ಯಗಳಿಂದ 6 ಅಂಕ ಹೊಂದಿರು ಕೆಕೆಆರ್ಗೆ ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಈಗಾಗಲೇ ಡೆಲ್ಲಿ ಮತ್ತು ಸಿಎಸ್ಕೆ ಪ್ಲೇ ಆಫ್ಗೆ ತುಂಬಾ ಹತ್ತಿರದಲ್ಲಿವೆ. ಆರ್ಸಿಬಿ 10 ಅಂಕ ಹೊಂದಿದ್ದು 3ನೇ ಸ್ಥಾನದಲ್ಲಿದೆ. ಹಾಗಾಗಿ ಎಲ್ಲಾ ಪಂದ್ಯಗಳು ಮಾರ್ಗನ್ ಪಡೆಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ.
ಇದನ್ನೂ ಓದಿ: ವೆಸ್ಟ್ ಇಂಡೀಸ್ಗೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ರಿಕೆಟಿಗನ ಮೇಲೆ ಭ್ರಷ್ಟಾಚಾರ ಆರೋಪ