ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ ಅವರು ಥಟ್ ಅಂತ ತೆಗೆದುಕೊಳ್ಳುವ ನಿರ್ಧಾರ, ಸ್ವಭಾವ ಮತ್ತು ಚುರುಕು ಬುದ್ಧಿಗೆ ನಾನು ಬಹಳ ಆಕರ್ಷಿತನಾಗಿದ್ದೇನೆ ಎಂದು ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜೋಸ್ ಬಟ್ಲರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2011ರ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಅವರು ಆಡಿದ ಆಕ್ರಮಣಕಾರಿ ಆಟ ಇಂದಿಗೂ ಮರೆಯುಂತಿಲ್ಲ. ಅವರ ಪರಿಚಯ ಮಾಡಿಕೊಟ್ಟ ಹೆಲಿಕಾಪ್ಟರ್ ಸಿಕ್ಸರ್ಗಳು ಅವರಿಗೆ ಅಷ್ಟೇ ಅಲ್ಲ, ಭಾರತ ತಂಡಕ್ಕೂ ಒಂದು ಹಿರಿಮೆ. ಅಂದಿನ ತಂಡದ ಗೆಲುವಿಗೆ ಅವರ ಹೆಲಿಕಾಪ್ಟರ್ ಸಿಕ್ಸರ್ಗಳೇ ಕಾರಣ. ಹೆಲಿಕಾಪ್ಟರ್ ಸಿಕ್ಸ್ ಹೊಡೆಯುವುದೆಂದರೆ ಧೋನಿಗೆ ಎಲ್ಲಿಲ್ಲದ ಖುಷಿ. ಕುಣಿದು ಕುಪ್ಪಳಿಸುವ ಆ ಸಮಯದಲ್ಲಿ ಅವರು ಹೆಚ್ಚಾಗಿ ಆಚರಣೆ ಮಾಡಿದ್ದನ್ನು ನಾನು ನೋಡಲಿಲ್ಲ ಎಂದು ಸೋಲು ಮತ್ತು ಗೆಲುವು ಎರಡನ್ನು ಸಮನಾಗಿ ಸ್ವೀಕರಿಸುವ ಧೋನಿ ಅವರ ಸ್ವಭಾವ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ತಂಡಕ್ಕೆ ಗೆಲುವು ತಂದುಕೊಟ್ಟ ಅವರ ಹೆಲಿಕಾಪ್ಟರ್ ಸಿಕ್ಸರ್ಗಳೆಂದರೆ ನಾನಷ್ಟೇ ಅಲ್ಲ, ಇಡೀ ವಿಶ್ವವೇ ಮಾರುಹೋಗಿದೆ. ವೈಯಕ್ತಿಕವಾಗಿ ಅವರು ಬ್ಯಾಟ್ ಬೀಸುವ ಕ್ರಮವನ್ನು ನಾನು ಇಷ್ಟಪಡುತ್ತೇನೆ. 2011ರ ವಿಶ್ವಕಪ್‌ನ ಫೈನಲ್ ಪಂದ್ಯ ಭಾರತೀಯ ಕ್ರಿಕೆಟ್ ಇತಿಹಾಸದ ಅತಿದೊಡ್ಡ ಕ್ಷಣ. ಧೋನಿ ಆಡುವ ಆಟವನ್ನು ನೋಡುವುದೇ ಒಂದು ಭಾಗ್ಯ ಎಂದು ಬಟ್ಲರ್ ಹೇಳಿದರು.
ಇದನ್ನೂ ಓದಿ: ಸ್ಯಾಮ್ ಕರ್ರನ್ ಧೋನಿಯಂತೆ ಕೊನೆವರೆಗೆ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿದ್ರು: ಜೋಸ್ ಬಟ್ಲರ್
ಯಾರಿಗೂ ಬರಲಾರದ ಅವರು ಯೋಚಿಸುವ ಯೋಚನೆಗಳು, ತಂಡವನ್ನು ಕರೆದೊಯ್ಯುವ ಅದ್ಭುತ ಮಾರ್ಗ, ಅವರ ಚುರುಕು ಬುದ್ಧಿಗೆ ನಾನು ಮಾರುಹೋಗಿದ್ದೇನೆ. ಮಿಂಚು ಹೊಡೆದಂತೆ ಕ್ಷಣಮಾತ್ರದಲ್ಲೇ ಸ್ಟಂಪ್ ಮಾಡುವ ಅವರ ಆ ಕೌಶಲ್ಯ ನನಗೂ ಸೇರಿದಂತೆ ಎಲ್ಲರಿಗೂ ಮಾದರಿ ಎಂದು ಅವರಾಡುವ ಆಟದ ವೈಖರಿ ಕುರಿತು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.