ಮೆಲ್ಬೋರ್ನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-1 ಅಂತರದಲ್ಲಿ ಗೆಲುವು ಸಾಧಿಸಿ, ಮಹತ್ವದ ಮುನ್ನಡೆ ಪಡೆದುಕೊಂಡಿದೆ. ಸೆಪ್ಟೆಂಬರ್ 10ರಿಂದ ಮ್ಯಾಂಚೆಸ್ಟರ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಅದಕ್ಕಾಗಿ ಟೀಂ ಅಭ್ಯಾಸದಲ್ಲಿ ಭಾಗಿಯಾಗಿದೆ.
ಓವಲ್ ಮೈದಾನದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ 157 ರನ್ಗಳ ಗೆಲುವು ಪಡೆದಿದೆ. ಇದರ ಜತೆಗೆ 50 ವರ್ಷಗಳ ನಂತರ ಈ ಮೈದಾನದಲ್ಲಿ ವಿಜಯ ಸಾಧಿಸಿರುವ ದಾಖಲೆಯನ್ನೂ ನಿರ್ಮಿಸಿದೆ. ಭಾರತ ತಂಡದ ಪ್ರದರ್ಶನಕ್ಕೆ ವಿಶ್ವ ಕ್ರಿಕೆಟ್ ಲೋಕದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವಿಚಾರವಾಗಿ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಕೂಡ ತಂಡದ ಗುಣಗಾನ ಮಾಡಿದ್ದಾರೆ.
'ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವದ ಅತ್ಯುತ್ತಮ ತಂಡ. ಅಮೋಘ ರೀತಿಯಲ್ಲಿ ಜಯ ಸಾಧಿಸಿರುವ ಕೊಹ್ಲಿ ಪಡೆಗೆ ಅಭಿನಂದನೆಗಳು. ಕೊಹ್ಲಿಗೆ ಎಲ್ಲ ಆಟಗಾರರಿಂದಲೂ ಮನ್ನಣೆ ಸಿಗುತ್ತದೆ. ಆತನಿಗೋಸ್ಕರ ಮೈದಾನದಲ್ಲಿ ಎಲ್ಲರೂ ಆಡುತ್ತಿದ್ದಾರೆಂಬ ಭಾವನೆ ಮೂಡುತ್ತದೆ. ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುವ ರೀತಿಯಿಂದಾಗಿ ಆತನ ಮೇಲೆ ಪ್ರತಿಯೊಬ್ಬರೂ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಯಶಸ್ವಿಯಾಗಿದ್ದಾರೆ' ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮುಂದಿನ ವರ್ಷ ಜುಲೈನಲ್ಲಿ ಭಾರತದಿಂದ ಇಂಗ್ಲೆಂಡ್ ಪ್ರವಾಸ.. ಟಿ-20, ಏಕದಿನ ಸರಣಿಯಲ್ಲಿ ಭಾಗಿ..
ಕೊಹ್ಲಿಯಂಥ ಆಟಗಾರ ಅಥವಾ ಕ್ಯಾಪ್ಟನ್ ಇರುವಾಗ ಟೆಸ್ಟ್ ಕ್ರಿಕೆಟ್ ದೀರ್ಘಕಾಲ ಇರುವಂತೆ ಮಾಡಬಹುದು ಎಂದು ವಾರ್ನ್ ಹೇಳಿದ್ದಾರೆ. ಜೊತೆಗೆ, ಕೊಹ್ಲಿಯನ್ನು ಈ ಗ್ರಹದ ಅತಿದೊಡ್ಡ ಸೂಪರ್ಸ್ಟಾರ್ ಎಂದು ಹೊಗಳಿದ್ದಾರೆ. ಮೈದಾನದಲ್ಲಿ ತಂಡದ ಸಾಮೂಹಿಕ ಪ್ರಯತ್ನದಿಂದಾಗಿ ಜಯ ಸಿಕ್ಕಿದೆ. ಆದರೆ ತಂಡದ ಮೇಲೆ ನೀವು ಇಟ್ಟಿರುವ ನಂಬಿಕೆ ನಿಜಕ್ಕೂ ಶ್ಲಾಘನೀಯ ಎಂದು ವಾರ್ನ್ ತಿಳಿಸಿದ್ದಾರೆ.
ಅವರಿಗೆ ತನ್ನ ತಂಡದ ಮೇಲೆ ಸಂಪೂರ್ಣ ನಂಬಿಕೆ ಇದೆ. ಇದೇ ಕಾರಣಕ್ಕಾಗಿ ವಿದೇಶಿ ನೆಲದಲ್ಲಿ ಹೆಚ್ಚಿನ ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಜೊತೆಗೆ ಸಾಗರೋತ್ತರ ಟೆಸ್ಟ್ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದಿದ್ದಾರೆ.